ಮಕ್ಕಳು ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವ ಮನರಂಜನೆ ಮತ್ತು ಹೋಟೆಲ್ ಉದ್ಯಮಕ್ಕೆ (Hospitality) ಸಂಬಂಧಿಸಿದ ಸಂಸ್ಥೆಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ. ಇದು ಅತ್ಯಂತ ಗಂಭೀರವಾದ ವಿಷಯ ಎಂದು ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
’ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ (Just Rights for Children Alliance) ಸಂಸ್ಥೆಯು ಸsnapshotಲ್ಲಿಸಿದ್ದ ಪಿಐಎಲ್ನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಆರ್ಕೆಸ್ಟ್ರಾ, ಡ್ಯಾನ್ಸ್ ಬಾರ್, ನೃತ್ಯ ತಂಡಗಳು, ನೌಟಂಕಿ ಪ್ರದರ್ಶನಗಳು, ಮಸಾಜ್ ಪಾರ್ಲರ್ಗಳು, ಸ್ಪಾಗಳು ಮತ್ತು ಸಲೂನ್ಗಳೂ ಸೇರಿದಂತೆ ಮಕ್ಕಳು ಸುಲಭವಾಗಿ ಶೋಷಣೆಗೆ ಒಳಗಾಗಬಹುದಾದ ಮನರಂಜನೆ ಹಾಗೂ ಹೋಟೆಲ್ ಉದ್ಯಮ ವಲಯಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಬಾಲಕಾರ್ಮಿಕ ಮತ್ತು ಹದಿಹರೆಯದವರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಸೆಕ್ಷನ್ 4 ರ ಅಡಿಯಲ್ಲಿ ತನಗಿರುವ ಅಧಿಕಾರವನ್ನು ಚಲಾಯಿಸುವ ಮೂಲಕ, ಮಕ್ಕಳ ಉದ್ಯೋಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುವ ವೃತ್ತಿಗಳ ಪಟ್ಟಿಯನ್ನು ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿ ಕೋರಿದೆ.
ಆರ್ಕೆಸ್ಟ್ರಾ, ಡ್ಯಾನ್ಸ್ ಬಾರ್, ನೃತ್ಯ ತಂಡಗಳು, ನೌಟಂಕಿ ಪ್ರದರ್ಶನಗಳು, ಮಸಾಜ್ ಪಾರ್ಲರ್ಗಳು, ಸ್ಪಾಗಳು, ಸಲೂನ್ಗಳು ಮತ್ತು ಮಕ್ಕಳನ್ನು ಅಶ್ಲೀಲ ಅಥವಾ ಶೋಷಣಾತ್ಮಕವಾಗಿ ಬಿಂಬಿಸುವ ಇಂತಹದೇ ಇತರ ಸಂಸ್ಥೆಗಳಲ್ಲಿ 18 ವರ್ಷದೊಳಗಿನ ಮಕ್ಕಳ ಉದ್ಯೋಗ ಅಥವಾ ಪ್ರದರ್ಶನವನ್ನು ‘ಬಾಲಕಾರ್ಮಿಕ ಮತ್ತು ಹದಿಹರೆಯದವರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ’ಯ (CALPRA) ಅನುಸೂಚಿಯ (Schedule) ಭಾಗ ‘ಎ’ ಗೆ ಸೇರಿಸುವ ಮೂಲಕ ಸಂಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.
ಅಲ್ಲದೆ, ಮಸಾಜ್ ಪಾರ್ಲರ್ಗಳು, ಜಿಮ್ನಾಷಿಯಂಗಳು, ಮನರಂಜನಾ ಕೇಂದ್ರಗಳು ಮತ್ತು ವೈದ್ಯಕೀಯ ಸೌಲಭ್ಯಗಳಂತಹ ವಲಯಗಳಲ್ಲಿನ ಬಾಲಕಾರ್ಮಿಕ ಪದ್ಧತಿಯನ್ನು ಕಾಯ್ದೆಯ ಅನುಸೂಚಿಯ ಅಡಿಯಲ್ಲಿ ಸದ್ಯ ಇರುವ ‘ನಿಯಂತ್ರಿತ’ (Regulated) ವರ್ಗದಿಂದ ‘ನಿಷೇಧಿತ’ (Prohibited) ವರ್ಗಕ್ಕೆ ಸ್ಥಳಾಂತರಿಸುವ ಮೂಲಕ ಅಲ್ಲಿ ಸಂಪೂರ್ಣ ನಿಷೇಧ ಹೇರಬೇಕು ಎಂದು ಅರ್ಜಿ ಒತ್ತಾಯಿಸಿದೆ.
ಮನರಂಜನೆಯ ನೆಪದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳು ಸೇರಿದಂತೆ ಇಂತಹ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳನ್ನು ರಕ್ಷಿಸಲು ಮತ್ತು ಅವರ ಪುನರ್ವಸತಿಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ರೂಪಿಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗಕ್ಕೆ (NCPCR) ನಿರ್ದೇಶನ ನೀಡುವಂತೆಯೂ ಅರ್ಜಿಯಲ್ಲಿ ಕೇಳಿಕೊಳ್ಳಲಾಗಿದೆ.
ಕಾನೂನಿನಲ್ಲಿರುವ ಲೋಪದೋಷಗಳು ಮಕ್ಕಳು ನಿಂದನೆ ಮತ್ತು ಶೋಷಣೆಗೆ ತುತ್ತಾಗಬಹುದಾದ ವಲಯಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಿವೆ ಎಂದು ವಾದಿಸಿರುವ ಅರ್ಜಿದಾರರು, ಈ ನಿಟ್ಟಿನಲ್ಲಿ ಬಲವಾದ ರಕ್ಷಣಾತ್ಮಕ ಕ್ರಮಗಳು ಮತ್ತು ಪುನರ್ವಸತಿ ವ್ಯವಸ್ಥೆಗಳ ಅಗತ್ಯವನ್ನು ಒತ್ತಿಹೇಳಿದ್ದಾರೆ.








