ಬೆಂಗಳೂರು: ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ತೀವ್ರ ಆತಂಕ ಮೂಡಿಸಿವೆ. ಕೃಷಿ ಇಲಾಖೆಯ (ಬೆಳೆ ಅಭಿವೃದ್ಧಿ ಮತ್ತು ಯೋಜನೆ) ಅಪರ ಕೃಷಿ ನಿರ್ದೇಶಕರ ಕಚೇರಿಯಿಂದ ಲಭ್ಯವಾಗಿರುವ ಅಧಿಕೃತ ವರದಿಯ ಪ್ರಕಾರ, 2025-26ನೇ ಸಾಲಿನಲ್ಲಿ ನವೆಂಬರ್ 15, 2025ರ ಅಂತ್ಯಕ್ಕೆ ರಾಜ್ಯಾದ್ಯಂತ ಒಟ್ಟು 377 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ವರದಿಯಾಗಿರುವ ಒಟ್ಟು ಪ್ರಕರಣಗಳ ಪೈಕಿ 46 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 331 ಪ್ರಕರಣಗಳನ್ನು ತೀರ್ಮಾನಕ್ಕೆ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಸದ್ಯಕ್ಕೆ 310 ಪ್ರಕರಣಗಳು ಪರಿಹಾರಕ್ಕೆ ಅರ್ಹ ಎಂದು ಗುರುತಿಸಲ್ಪಟ್ಟಿವೆ.
ಕಲಬುರಗಿ, ಬೆಳಗಾವಿ, ಹಾವೇರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು
ರಾಜ್ಯದ ಜಿಲ್ಲಾವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.
ಕಲಬುರಗಿ ಪ್ರಥಮ ಸ್ಥಾನ: ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 40 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 34 ಪ್ರಕರಣಗಳು ಪರಿಹಾರಕ್ಕೆ ಅರ್ಹವಾಗಿವೆ.
ಬೆಳಗಾವಿ ದ್ವಿತೀಯ ಸ್ಥಾನ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿದ್ದು, 34 ಪ್ರಕರಣಗಳು ಅರ್ಹವೆಂದು ತೀರ್ಮಾನಿಸಲಾಗಿದೆ.
ಹಾವೇರಿ ಹಾಗೂ ಮೈಸೂರು: ಹಾವೇರಿಯಲ್ಲಿ 35 ಹಾಗೂ ಮೈಸೂರು ಜಿಲ್ಲೆಯಲ್ಲಿ 32 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿ ತೀವ್ರ ಕಳವಳ ಮೂಡಿಸಿವೆ.
ಹಾಸನ ಮತ್ತು ಚಿಕ್ಕಮಗಳೂರು: ಹಾಸನದಲ್ಲಿ 27 ಹಾಗೂ ಚಿಕ್ಕಮಗಳೂರಿನಲ್ಲಿ 25 ಪ್ರಕರಣಗಳು ದಾಖಲಾಗಿವೆ.
ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪ್ರಕರಣಗಳು? (ಪ್ರಮುಖ ಜಿಲ್ಲೆಗಳ ವಿವರ):
ಬಾಗಲಕೋಟೆ – 17
ಧಾರವಾಡ – 16
ಮಂಡ್ಯ – 15
ಕೊಪ್ಪಳ ಹಾಗೂ ವಿಜಯಪುರ – ತಲಾ 14
ಬೀದರ್ – 13
ಶಿವಮೊಗ್ಗ – 12
ಬಳ್ಳಾರಿ ಹಾಗೂ ಉತ್ತರ ಕನ್ನಡ – ತಲಾ 9
ಶೂನ್ಯ ಪ್ರಕರಣ ದಾಖಲಾದ ಜಿಲ್ಲೆಗಳು:
ಈ ಕರಾಳ ವರದಿಯ ನಡುವೆಯೂ ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಯಾವುದೇ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗದೆ (0 ಪ್ರಕರಣಗಳು) ಇರುವುದು ಸಮಾಧಾನಕರ ಸಂಗತಿಯಾಗಿದೆ. ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ತುಮಕೂರು, ಉಡುಪಿ ಹಾಗೂ ಬೆಂಗಳೂರು ದಕ್ಷಿಣ ಭಾಗಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.








