ಟೆಹ್ರಾನ್:ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣವನ್ನು ತಿಳಿಗೊಳಿಸಲು ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳು ಮಹತ್ವದ ಹಂತ ತಲುಪಿವೆ. ಚರ್ಚೆಯಾಗುತ್ತಿರುವ ಹಲವು ಪ್ರಮುಖ ವಿಷಯಗಳ ಕುರಿತು ಉಭಯ ದೇಶಗಳ ನಡುವೆ ಒಮ್ಮತ ಮೂಡಿದೆ. ಆದರೆ, ಇದರರ್ಥ ತಕ್ಷಣವೇ ಯಾವುದೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೇಲ್ ಬಘೈ (Esmaeil Baghaei) ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕದೊಂದಿಗಿನ ಸಂಭಾವ್ಯ ಒಪ್ಪಂದದ ಪ್ರಕ್ರಿಯೆಯಲ್ಲಿ ಪ್ರಗತಿ ಕಂಡುಬಂದಿದ್ದರೂ, ಅಂತಿಮ ಒಪ್ಪಂದವು ಸದ್ಯದ ಮಟ್ಟಿಗೆ ಅಷ್ಟು ಹತ್ತಿರದಲ್ಲಿಲ್ಲ ಎಂದು ತಿಳಿಸಿದ್ದಾರೆ.
”ನಾವು ಚರ್ಚಿಸುತ್ತಿರುವ ವಿಷಯಗಳ ಪೈಕಿ ಬಹುಪಾಲು ವಿಚಾರಗಳಲ್ಲಿ ಒಂದು ಸ್ಪಷ್ಟ ತೀರ್ಮಾನ ಹಾಗೂ ಒಮ್ಮತಕ್ಕೆ ಬಂದಿರುವುದು ನಿಜ. ಆದರೆ, ಈ ಕಾರಣದಿಂದಾಗಿ ಒಪ್ಪಂದಕ್ಕೆ ಸಹಿ ಹಾಕುವುದು ತೀರಾ ಹತ್ತಿರದಲ್ಲಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ” ಎಂದು ಬಘೈ ಹೇಳಿದ್ದಾರೆ. ಅಮೆರಿಕದ ಅಧಿಕಾರಿಗಳು ಪದೇ ಪದೇ ತಮ್ಮ ನಿಲುವುಗಳನ್ನು ಬದಲಾಯಿಸುತ್ತಿರುವುದು ಒಪ್ಪಂದದ ಪ್ರಗತಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
”ನಮ್ಮ ಸದ್ಯದ ಮಾತುಕತೆಯ ಮುಖ್ಯ ಉದ್ದೇಶ ಯುದ್ಧವನ್ನು ಕೊನೆಗಾಣಿಸುವುದಾಗಿದೆ. ಈ ಹಂತದಲ್ಲಿ ನಾವು ಪರಮಾಣು ವಿಷಯಗಳ ಬಗ್ಗೆ ಚರ್ಚಿಸುತ್ತಿಲ್ಲ. ಎಸ್ಮೇಲ್ ಬಘೈ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದರು.
ಅಮೆರಿಕದ ನಿಲುವೇನು?
ಇದಕ್ಕೂ ಮುನ್ನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ (Marco Rubio) ಅವರು, “ಇರಾನ್ ಜೊತೆಗಿನ ಮಾತುಕತೆಯಲ್ಲಿ ಗಣನೀಯ ಪ್ರಗತಿಯಾಗಿದೆ ಮತ್ತು ವಾಣಿಜ್ಯ ಹಡಗುಗಳ ಸಂಚಾರಕ್ಕಾಗಿ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ಸಾಗುತ್ತಿವೆ” ಎಂದು ಆಶಾವಾದ ವ್ಯಕ್ತಪಡಿಸಿದ್ದರು. ಅಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ, “ಇರಾನ್ ಜೊತೆಗಿನ ಒಪ್ಪಂದವು ಅತ್ಯಂತ ಮಹತ್ವದ್ದಾಗಿರಲಿದೆ, ಇಲ್ಲದಿದ್ದರೆ ಯಾವುದೇ ಒಪ್ಪಂದವೂ ಇರುವುದಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.








