ಮುಂಬೈ: ನೀವು ಬ್ಯಾಂಕ್ಗಳಿಂದ ಸಾಲ (Loan) ಪಡೆಯಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ. ಏಕೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಾಲಗಾರರಿಗೆ ಶಾಕ್ ನೀಡುವಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ನಿಮ್ಮ ಸಿಬಿಲ್ ಸ್ಕೋರ್ 730 ಕ್ಕಿಂತ ಕಡಿಮೆ ಇದ್ದರೆ, ಇನ್ಮುಂದೆ ನಿಮಗೆ ಸಾಲ ಸಿಗುವುದು ಭಾರಿ ಕಷ್ಟವಾಗಬಹುದು!
ಬ್ಯಾಂಕಿಂಗ್ ವಲಯದಲ್ಲಿನ ಆರ್ಥಿಕ ಶಿಸ್ತು ಮತ್ತು ಭವಿಷ್ಯದ ನಷ್ಟವನ್ನು ತಡೆಯುವ ಉದ್ದೇಶದಿಂದ ಆರ್ಬಿಐ ‘ಎಕ್ಸ್ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL – Expected Credit Loss) ಹೆಸರಿನ ಹೊಸ ನಿಯಮಾವಳಿಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಮುಂದಿನ ಆರ್ಥಿಕ ವರ್ಷದಿಂದ (ಏಪ್ರಿಲ್ 2027) ಈ ಹೊಸ ನಿಯಮಗಳು ಅಧಿಕೃತವಾಗಿ ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ.
ಏನಿದು ಇಸಿಎಲ್ (ECL) ನಿಯಮ?
ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಕಾರ, ಗ್ರಾಹಕರು ಸಾಲದ ಕಂತುಗಳನ್ನು (EMI) ಕಟ್ಟದೆ ಸುಸ್ತಿದಾರರಾದ (Default) ಬಳಿಕವಷ್ಟೇ ಬ್ಯಾಂಕುಗಳು ಕ್ರಮ ಕೈಗೊಳ್ಳುತ್ತವೆ. ಆದರೆ, ಹೊಸ ಇಸಿಎಲ್ ಫ್ರೇಮ್ವರ್ಕ್-2026 ನಿಯಮದಡಿ, ಬ್ಯಾಂಕುಗಳು ಗ್ರಾಹಕರ ಭವಿಷ್ಯದ ಡೇಟಾವನ್ನು ಬಳಸಿಕೊಂಡು ಅವರ ಆರ್ಥಿಕ ರಿಸ್ಕ್ ಅನ್ನು ನಿರಂತರವಾಗಿ ಅಂದಾಜು ಮಾಡುತ್ತವೆ. ಇಎಂಐ ಪಾವತಿಯಲ್ಲಿ ವಿಳಂಬ, ಆದಾಯದಲ್ಲಿನ ಏರುಪೇರು ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿನ ಹಠಾತ್ ಹೆಚ್ಚಳದಂತಹ ಅಂಶಗಳನ್ನು ಆಧರಿಸಿ ಬ್ಯಾಂಕುಗಳು ಮೊದಲೇ ಎಚ್ಚೆತ್ತುಕೊಳ್ಳಲಿವೆ.
62% ಸಾಲಗಾರರ ಮೇಲೆ ಎಫೆಕ್ಟ್!
ವರದಿಗಳ ಪ್ರಕಾರ, ದೇಶದಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಪೈಕಿ ಸುಮಾರು ಶೇ. 62 ರಷ್ಟು ಜನರು 730 ಕ್ಕಿಂತ ಕಡಿಮೆ ಸಿಬಿಲ್ ಸ್ಕೋರ್ ಹೊಂದಿದ್ದಾರೆ. ಹೊಸ ನಿಯಮ ಜಾರಿಗೆ ಬಂದರೆ ಈ ವರ್ಗದ ಜನರಿಗೆ ಸಾಲ ಸಿಗುವುದು ಅತ್ಯಂತ ಕಠಿಣವಾಗಲಿದೆ. ಒಂದು ವೇಳೆ ಬ್ಯಾಂಕುಗಳು ಸಾಲ ನೀಡಲು ಒಪ್ಪಿದರೂ, ಹೆಚ್ಚಿನ ಬಡ್ಡಿ ದರ ವಿಧಿಸುವುದು ಅಥವಾ ಹೆಚ್ಚುವರಿ ಶ್ಯೂರಿಟಿ (ಪೂಚೀಕತ್ತು) ನೀಡುವಂತೆ ಷರತ್ತು ವಿಧಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಕ್ರೆಡಿಟ್ ಹಿಸ್ಟರಿ ಸರಿಯಿಲ್ಲದವರ ಸಾಲದ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.
ಪ್ರೀಮಿಯಂ ಗ್ರಾಹಕರಿಗೆ ಬಂಪರ್ ಆಫರ್
ಈ ಹೊಸ ನಿಯಮದಿಂದಾಗಿ 730 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಹೊಂದಿರುವ ದೇಶದ ಸುಮಾರು 7 ಕೋಟಿ ಪ್ರೀಮಿಯಂ ಗ್ರಾಹಕರಿಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನೀಡಲಿವೆ. ಅವರಿಗೆ ಆಕರ್ಷಕ ಆಫರ್ಗಳು, ಕಡಿಮೆ ಬಡ್ಡಿ ದರ ಹಾಗೂ ವಿವಿಧ ರೀತಿಯ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ ಸಿಗಲಿವೆ.
ಕಡಿಮೆ ಸಿಬಿಲ್ ಸ್ಕೋರ್ ಇದ್ದವರಿಗೆ ಪರ್ಯಾಯ ಮಾರ್ಗಗಳೇನು?
ಹೊಸ ನಿಯಮಗಳ ನಂತರವೂ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗಾಗಿ ಕೆಲವು ಪರ್ಯಾಯ ಆರ್ಥಿಕ ಉತ್ಪನ್ನಗಳು ಲಭ್ಯವಿರಲಿವೆ:
ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ಗಳು: ಎಫ್ಡಿ (FD) ಆಧಾರಿತ ಕ್ರೆಡಿಟ್ ಕಾರ್ಡ್ಗಳು.
ಸ್ಟೆಪ್-ಅಪ್ ಲೋನ್: ಹಂತಹಂತವಾಗಿ ಸಾಲದ ಮೌಲ್ಯ ಹೆಚ್ಚಿಸಿಕೊಳ್ಳುವ ಸೌಲಭ್ಯ.
ಮೈಕ್ರೋ ಲೋನ್ (ಸೂಕ್ಷ್ಮ ಸಾಲಗಳು): ಸಣ್ಣ ಪ್ರಮಾಣದ ಸಾಲದ ಮಾರ್ಗಗಳು.
ಗಮನಿಸಿ: ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಿಬಿಲ್ ಸ್ಕೋರ್ ಕೊಂಚ ಕಡಿಮೆಯಿದ್ದರೂ, ಬ್ಯಾಂಕಿನ ಹಳೆಯ ಹಾಗೂ ನಂಬಿಕಸ್ಥ ಗ್ರಾಹಕರಿಗೆ ಮ್ಯಾನೇಜರ್ಗಳು ಸಾಲ ಮಂಜೂರು ಮಾಡುತ್ತಿದ್ದರು. ಆದರೆ, ಹೊಸ ಆರ್ಬಿಐ ನಿಯಮಗಳು ಜಾರಿಯಾದ ಬಳಿಕ ಇಂತಹ ವೈಯಕ್ತಿಕ ರಿಯಾಯಿತಿಗಳಿಗೆ ಬ್ರೇಕ್ ಬೀಳಲಿದ್ದು, ಸಂಪೂರ್ಣವಾಗಿ ನಿಯಮಾವಳಿಗಳ ಆಧಾರದ ಮೇಲೆಯೇ ಸಾಲದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ನಿಮ್ಮ ಆರ್ಥಿಕ ಭವಿಷ್ಯ ಸುರಕ್ಷಿತವಾಗಿರಲು ಮತ್ತು ತುರ್ತು ಸಂದರ್ಭಗಳಲ್ಲಿ ಸಾಲದ ಸೌಲಭ್ಯ ಸಿಗಲು ಇಂದಿನಿಂದಲೇ ನಿಮ್ಮ ಸಿಬಿಲ್ ಸ್ಕೋರ್ ಅನ್ನು 730 ಕ್ಕಿಂತ ಹೆಚ್ಚಿಗೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.








