ಬೆಂಗಳೂರು : ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ಬೇಗೆ ಹಾಗೂ ಉಷ್ಣಾಂಶದಿಂದ ಕಂಗಾಲಾಗಿದ್ದ ಕರ್ನಾಟಕದ ಜನತೆಗೆ ವರುಣದೇವ ತಂಪು ಎರೆದಿದ್ದಾನೆ. ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಬಿರುಗಾಳಿ, ಗುಡುಗು ಮತ್ತು ಮಿಂಚು ಸಹಿತ ಪ್ರೀ-ಮಾನ್ಸೂನ್ (ಮುಂಗಾರು ಪೂರ್ವ) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಒಟ್ಟು 8 ಪ್ರಮುಖ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್.
ರಾಜ್ಯದ ಒಟ್ಟು ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ವರುಣನ ಅಬ್ಬರ ಜೋರಾಗಿರಲಿದೆ. ಮಳೆಯ ತೀವ್ರತೆ ಕೊಂಚ ಕಡಿಮೆ ಇರಲಿರುವ ಜಿಲ್ಲೆಗಳೆಂದರೆ ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ. ಈ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.








