ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಳೆರಾಯ ಕಾಲಿಟ್ಟಿದ್ದಾನೆ. ಗುರುವಾರ ಸಂಜೆ ಸುರಿದ ಮಳೆಗೆ ಹತ್ತಾರು ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ವಾಹನಗಳನ್ನ ಜಖಂಗೊಂಡಿದೆ.
ರಾಜಾಜಿನಗರದಲ್ಲಿ ಬೃಹದಾಕಾರದ ಮರವೊಂದು ಉರುಳಿಬಿದ್ದು, ಕಾರು ಮತ್ತು ಬೈಕ್ಗಳು ಜಖಂಗೊಂಡಿವೆ. ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಬೃಹತ್ ಮರ ಧರೆಗೆ ಉರುಳಿತ್ತು. ಇದ್ರಿಂದ ಎರಡು ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದ್ರೆ ಮರ ತೆರವುಗೊಳಿಸುವವರೆಗೆ ಈ ಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.
ಇನ್ನೂ ಯುಬಿ ಸಿಟಿಯ ಸದರ್ನ್ ಸ್ಟಾರ್ ಹೋಟೆಲ್ ಮುಂಭಾಗ ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ರಸ್ತೆ ಕುಸಿದು, ಅಲ್ಲೇ ನಿಂತಿದ್ದ ಇನ್ನೋವಾ ಕಾರು ಸಿಲುಕಿಕೊಂಡಿದೆ. ಕುಸಿದ ರಸ್ತೆ ಕಂಡು ಜನ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಬಳಿಕ ಕಳಪೆ ಕಾಮಗಾರಿ ಅಂತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಂದಿನಿ ಲೇಔಟ್ನ 4ನೇ ಬ್ಲಾಕ್ನ ಒಂದೇ ರಸ್ತೆಯಲ್ಲಿ ಐದಾರು ಮರಗಳು ನೆಲಕಲ್ಕುರುಳಿ ಬಿದ್ದಿವೆ. 5 ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಅಂಗಡಿ ಮುಂಭಾಗದ ಶೆಡ್, ಮನೆಗಳ ಮೇಲೂ ಮರ ಬಿದ್ದಿದ್ದು, ಸಂಚಾರಕ್ಕೂ ಅಸ್ತವ್ಯಸ್ತ ಉಂಟಾಗಿದೆ. ಸದ್ಯ ಸ್ಥಳಕ್ಕೆ ದೌಡಾಯಿಸಿರುವ ಜಿಬಿಎ ಸಿಬ್ಬಂದಿ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.








