ನವದೆಹಲಿ : ರೈಲುಗಳಲ್ಲಿನ ವಿಪರೀತ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 1, 2026 ರಿಂದ ಜಾರಿಗೆ ಬರುವಂತೆ ಸ್ಲೀಪರ್ ಮತ್ತು ಎಸಿ ಕೋಚ್ಗಳ ವೈಟಿಂಗ್ ಲಿಸ್ಟ್ (Waiting List) ಟಿಕೆಟ್ಗಳ ವಿತರಣೆಗೆ ಕಡ್ಡಾಯ ಮಿತಿಯನ್ನು ಹೇರಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೈಲಿನ ಗ್ಯಾಲರಿಗಳು, ಶೌಚಾಲಯದ ಬಳಿ ಮತ್ತು ಬಾಗಿಲುಗಳ ಬಳಿ ಪ್ರಯಾಣಿಕರು ಗಿಜಿಗುಡುತ್ತಾ ನಿಂತು ಪ್ರಯಾಣಿಸುತ್ತಿರುವ ವೀಡಿಯೊಗಳು ವೈರಲ್ ಆಗಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಮಂಡಳಿಯು ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಹೊಸ ನಿಯಮದ ಮುಖ್ಯಾಂಶಗಳು:
ಸ್ಲೀಪರ್ ಕೋಚ್ಗಳಿಗೆ ಶೇ. 30 ರಷ್ಟು ಮಿತಿ: ಸ್ಲೀಪರ್ ತರಗತಿಯಲ್ಲಿ ಒಟ್ಟು ಆಸನಗಳ ಸಾಮರ್ಥ್ಯದ ಕೇವಲ ಶೇ. 30 ರಷ್ಟು ಮಾತ್ರ ವೈಟಿಂಗ್ ಲಿಸ್ಟ್ ಟಿಕೆಟ್ಗಳನ್ನು ನೀಡಲಾಗುತ್ತದೆ. ಅಂದರೆ, ಕೋಚ್ ಸಾಮರ್ಥ್ಯಕ್ಕೆ ಅನುಗುಣವಾಗಿ ಸರಾಸರಿ 150 ರಿಂದ 200 ವೈಟಿಂಗ್ ಲಿಸ್ಟ್ ಟಿಕೆಟ್ಗಳನ್ನು ಮಾತ್ರ ಬುಕ್ ಮಾಡಲು ಅವಕಾಶವಿರುತ್ತದೆ.
ಎಸಿ ಕೋಚ್ಗಳಿಗೆ ಶೇ. 60 ರಷ್ಟು ಮಿತಿ: ಎಸಿ ಬೋಗಿಗಳಲ್ಲಿ ಈ ಮುಂಚೆ ಇದ್ದ 300 ರ ಸ್ಥಿರ ಮಿತಿಯ ಬದಲಿಗೆ, ಇನ್ನು ಮುಂದೆ ಒಟ್ಟು ಆಸನ ಸಾಮರ್ಥ್ಯದ ಗರಿಷ್ಠ ಶೇ. 60 ರಷ್ಟು ಮಾತ್ರ ವೈಟಿಂಗ್ ಲಿಸ್ಟ್ ಟಿಕೆಟ್ಗಳನ್ನು ಮಿತಿಗೊಳಿಸಲಾಗುವುದು.
ಈ ನಿಯಮದ ಹಿಂದಿನ ಉದ್ದೇಶವೇನು?
ಹಿಂದೆ ಸ್ಲೀಪರ್ ಕ್ಲಾಸ್ನಲ್ಲಿ ವೈಟಿಂಗ್ ಲಿಸ್ಟ್ ಸಂಖ್ಯೆ 600 ರಿಂದ 700 ಕ್ಕೆ ತಲುಪುತ್ತಿತ್ತು ಮತ್ತು ಥರ್ಡ್ ಎಸಿ (3AC) ಯಲ್ಲಿ 400 ಕ್ಕೂ ಹೆಚ್ಚು ಜನರಿಗೆ ವೈಟಿಂಗ್ ಟಿಕೆಟ್ ಸಿಗುತ್ತಿತ್ತು. ಇದರಿಂದಾಗಿ ಕನ್ಫರ್ಮ್ ಟಿಕೆಟ್ ಇದ್ದ ಪ್ರಯಾಣಿಕರಿಗೂ ತೊಂದರೆಯಾಗುತ್ತಿತ್ತು.
ನವೆಂಬರ್ 12, 2015 ರ ನಂತರ ರೈಲ್ವೆಯು ತಾಂತ್ರಿಕವಾಗಿ ವೈಟಿಂಗ್ ಲಿಸ್ಟ್ಗೆ ಮಿತಿ ಹೇರಿತ್ತಾದರೂ, ಇದೀಗ ಹೆಚ್ಚುತ್ತಿರುವ ಜನದಟ್ಟಣೆಯನ್ನು ತಪ್ಪಿಸಲು ಈ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಹೊಸ ನಿಯಮದಿಂದಾಗಿ ಕಾಯುವಿಕೆ ಪಟ್ಟಿ ಚಿಕ್ಕದಾಗಲಿದ್ದು, ಪ್ರಯಾಣಿಕರ ಟಿಕೆಟ್ಗಳು ಕನ್ಫರ್ಮ್ (Confirm) ಆಗುವ ಸಾಧ್ಯತೆಗಳು ಗಣನೀಯವಾಗಿ ಹೆಚ್ಚಾಗಲಿವೆ. ನಿಯಮಿತ ಪ್ರಯಾಣಿಕರಿಗೆ ಇದು ನೆಮ್ಮದಿಯ ಪ್ರಯಾಣವನ್ನು ಒದಗಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.








