ಮೊಹಾಲಿ: ಪಂಜಾಬಿ ಗಾಯಕ ಅಲ್ಫಾಜ್ ಅಕಾ ಅಮಾನ್ಜೋತ್ ಸಿಂಗ್ ಪನ್ವಾರ್(Alfaaz aka Amanjot Singh Panwar) ಅವರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಗಾಯಕ ಹಿರ್ದೇಶ್ ಸಿಂಗ್ ಅಲಿಯಾಸ್ ಹನಿ ಸಿಂಗ್ ತಮಮ್ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರ ಅಲ್ಫಾಜ್ ಮೇಲೆ ಹಲ್ಲೆ ನಡೆದಿದೆ. ಅವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಫಾಜ್ ಮೊಹಾಲಿ ಧಾಬಾದ ಹೊರಗೆ ಬನೂರ್ ಲಾಂದ್ರನ್ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ವಾಹನ ಅವರಿಗೆ ಡಿಕ್ಕಿ ಹೊಡೆದಿದ್ದು ಅವರು ಗಾಯಗೊಂಡಿದ್ದಾರೆ. ಆರೋಪಿಯನ್ನು ಹರಿಯಾಣದ ಪಂಚಕುಲದ ರಾಯ್ಪುರ ರಾಣಿ ನಿವಾಸಿ ವಿಕ್ಕಿ ಎಂದು ಗುರುತಿಸಲಾಗಿದ್ದು, ಮೊಹಾಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಗಾಯಕ ಅಲ್ಫಾಜ್ ಶನಿವಾರ ರಾತ್ರಿ ಮೊಹಾಲಿಯ ಲ್ಯಾಂಡ್ರಾನ್ ರಸ್ತೆಯಲ್ಲಿರುವ ಧಾಬಾ (ಸ್ಥಳೀಯ ಉಪಾಹಾರ ಗೃಹ) ಗೆ ಹೋಗಿದ್ದರು. ಈ ವೇಳೆ ಆರೋಪಿಗಳು ಢಾಬಾ ಮಾಲೀಕರೊಂದಿಗೆ ಜಗಳವಾಡುತ್ತಿದ್ದರು. ಆಗ ಜಗಳ ಇತ್ಯರ್ಥಕ್ಕೆ ಅಲ್ಫಾಜ್ ಮಧ್ಯ ಪ್ರವೇಶಿಸಿದ್ದಾರೆ. ಆರೋಪಿಗಳು ಅಲ್ಫಾಜ್ ಅವರೊಂದಿಗೂ ಜಗಳವಾಡಿದ್ದರು. ನಂತ್ರ ಅಲ್ಲಿಂದ ಹೊರಟ ಅಲ್ಫಾಜ್ ತನ್ನ ಕಾರಿನ ಬಳಿ ಹೋದಾಗ ಆರೋಪಗಳು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.