ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಪ್ರವಾಸವು ಭಾರತದ ಪಾಲಿಗೆ ಭರ್ಜರಿ ಯಶಸ್ಸು ತಂದಿದೆ. ತಮ್ಮ ಐದು ದೇಶಗಳ ಸರಣಿ ಪ್ರವಾಸದ ಮೊದಲ ಹಂತವಾಗಿ ಅಬುಧಾಬಿಗೆ ತಲುಪಿದ ಪ್ರಧಾನಿ ಮೋದಿ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಉಭಯ ದೇಶಗಳ ನಡುವೆ ರಕ್ಷಣೆ, ಇಂಧನ ಮತ್ತು ಮೂಲಸೌಕರ್ಯ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಐತಿಹಾಸಿಕ ಒಪ್ಪಂದಗಳು ನಡೆದಿವೆ.
ಈ ಭೇಟಿಯ ಅತ್ಯಂತ ಪ್ರಮುಖ ಆಕರ್ಷಣೆಯಾಗಿ, ಯುಎಇ ಸರ್ಕಾರವು ಭಾರತದ ಮೂಲಸೌಕರ್ಯ ಹಾಗೂ ಬ್ಯಾಂಕಿಂಗ್ ವಲಯಗಳಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 41,500 ಕೋಟಿ ರೂಪಾಯಿ) ಬೃಹತ್ ಹೂಡಿಕೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಭಾರತ ಮತ್ತು ಯುಎಇ ನಡುವಿನ ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ‘ಕಾರ್ಯತಂತ್ರದ ರಕ್ಷಣಾ ಸಹಭಾಗಿತ್ವದ ಚೌಕಟ್ಟು’ (Strategic Defence Partnership Framework) ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಒಪ್ಪಂದದ ಅಡಿಯಲ್ಲಿ ಉಭಯ ದೇಶಗಳು ರಕ್ಷಣಾ ತಂತ್ರಜ್ಞಾನ, ಸೈಬರ್ ರಕ್ಷಣೆ, ಭಯೋತ್ಪಾದನೆ ನಿಗ್ರಹ ಮತ್ತು ಜಂಟಿ ಮಿಲಿಟರಿ ತರಬೇತಿಗಳಲ್ಲಿ ಪರಸ್ಪರ ಸಹಕರಿಸಲಿವೆ.ಇದು ಗಲ್ಫ್ ಮತ್ತು ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಭದ್ರತೆಯನ್ನು ಹೆಚ್ಚಿಸಲು ನೆರವಾಗಲಿದೆ.








