ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸಂಪೂರ್ಣ ಅನವಶ್ಯಕವಾಗಿದ್ದು, ನಮ್ಮ ನಡುವಿನ ಬಾಂಧವ್ಯ ಎಂದಿಗೂ ಹಾಳಾಗಿಲ್ಲ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಮೊದಲಿನಿಂದಲೂ ನಾನು ಇದನ್ನೇ ಹೇಳುತ್ತಾ ಬಂದಿದ್ದೇನೆ, ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ. ಕೆಲವು ಐಟಿ ಸೆಲ್ನವರು ಈ ವಿಷಯಕ್ಕೆ ಹೆಚ್ಚಿನ ಪ್ರಚಾರ ನೀಡಿದ್ದರಿಂದ ಅನವಶ್ಯಕವಾಗಿ ಈ ಚರ್ಚೆ ಮುನ್ನೆಲೆಗೆ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ, ಪಕ್ಷದಾಚೆಗೂ ಅಹಿಂದ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ತಾವು ಮುಂದುವರಿಸುವುದಾಗಿ ಅವರು ತಿಳಿಸಿದರು.
ಸಿಎಂ ಹುದ್ದೆ ಹಾಗೂ ಪಕ್ಷದ ಕೆಲಸದ ಕುರಿತು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಮತ್ತು ಸಿಎಂ ಹುದ್ದೆಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟ ಸತೀಶ್ ಜಾರಕಿಹೊಳಿ, “ಮುಖ್ಯಮಂತ್ರಿಯಾಗಲು ಕೇವಲ ಅಧ್ಯಕ್ಷ ಸ್ಥಾನವೇ ಬೇಕೆಂದಿಲ್ಲ. ಪಕ್ಷಕ್ಕಾಗಿ ದುಡಿದರೆ ಅದಕ್ಕೆ ತಕ್ಕ ಕೂಲಿ ಸಿಕ್ಕಿಯೇ ಸಿಗುತ್ತದೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾವೆಲ್ಲರೂ ಕೆಲಸ ಮಾಡಿದ್ದೇವೆ, ಹಾಗಾಗಿ ಅವರಿಗೆ ಅಧಿಕಾರ ಸಿಕ್ಕಿದೆ. ಯಾರು ಪಕ್ಷಕ್ಕೆ ಶ್ರಮಿಸುತ್ತಾರೋ ಅವರಿಗೆ ಹಕ್ಕು ಸಿಗುತ್ತದೆ. ಸದ್ಯ ನನಗೂ ಮಂತ್ರಿ ಸ್ಥಾನದ ರೂಪದಲ್ಲಿ ಕೂಲಿ ಸಿಕ್ಕಿದ್ದು, ನನಗೆ ಡಬಲ್ ಸಂತೃಪ್ತಿಯಿದೆ. ಕೆಲಸ ಮಾಡುವವರಿಗೆ ಕೇವಲ ಹುದ್ದೆ ಮುಖ್ಯವಲ್ಲ” ಎಂದರು. ಅಲ್ಲದೆ, 2028ರ ಮುಂದಿನ ಚುನಾವಣೆಯ ಸಿಎಂ ಸ್ಥಾನದ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿ, “ಇನ್ನೂ ಮಗುನೇ ಹುಟ್ಟಿಲ್ಲ, ಆಗಲೇ ಚರ್ಚೆ ಯಾಕೆ? ನಮಗೆ ಇನ್ನೂ ವಯಸ್ಸಿದೆ, ಕಾಯೋಣ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಕ್ರೀಡಾ ಖಾತೆಯ ಆಸೆ ಇತ್ತು: ಸಚಿವ ಸಂಪುಟದಲ್ಲಿ ತಮಗೆ ಕ್ರೀಡಾ ಖಾತೆಯ ಮೇಲಿದ್ದ ಆಸಕ್ತಿಯನ್ನು ಬಿಚ್ಚಿಟ್ಟ ಸಚಿವರು, “ನಾನು ಹೆಚ್ಚುವರಿಯಾಗಿ ಕ್ರೀಡಾ ಖಾತೆಯನ್ನು ಕೇಳಿದ್ದೆ. ನನಗೆ ಕ್ರೀಡೆಯ ಬಗ್ಗೆ ವೈಯಕ್ತಿಕವಾಗಿ ತುಂಬಾ ಒಲವಿದೆ. ಪ್ರತಿ ವರ್ಷ ಸ್ವಂತವಾಗಿ 50 ಲಕ್ಷ ರೂ. ಖರ್ಚು ಮಾಡಿ ಕ್ರೀಡಾಕೂಟಗಳನ್ನು ಆಯೋಜಿಸುತ್ತೇನೆ. ಆ ಖಾತೆ ಸಿಕ್ಕಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ, ರಾಜ್ಯವನ್ನು ನಂಬರ್ ಒನ್ ಸ್ಥಾನಕ್ಕೆ ತರುತ್ತಿದ್ದೆವು. ಆದರೆ ಈಗ ಪರಮೇಶ್ವರ್ ಅವರು ಆ ಖಾತೆಯನ್ನು ಕೇಳಿ ಪಡೆದಿದ್ದಾರೆ, ಅವರಿಗೂ ಕ್ರೀಡೆ ಎಂದರೆ ಇಷ್ಟ” ಎಂದು ಹೇಳಿದರು.
ಇದೇ ವೇಳೆ ಇಲಾಖೆಗಳ ವಿಭಜನೆ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರಲ್ಲಿರುವ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ಎಲ್ಲ ಇಲಾಖೆಗಳು ಒಟ್ಟಿಗಿದ್ದರೆ ಕೆಲಸ ಮಾಡಲು ಅನುಕೂಲ ಎಂಬುದು ಅವರ ಬೇಡಿಕೆಯಾಗಿದೆ. ಇದು ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಯಾಗಿದ್ದು, ಅವರೇ ಇದನ್ನು ಬಗೆಹರಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.








