ಕ್ವೆಟ್ಟಾ (ಪಾಕಿಸ್ತಾನ): ಪಾಕಿಸ್ತಾನದ ಅಸ್ಥಿರ ಪ್ರಾಂತ್ಯವಾದ ಬಲೂಚಿಸ್ತಾನದಲ್ಲಿ ಭಯೋತ್ಪಾದಕರು ಮತ್ತೊಮ್ಮೆ ರಕ್ತಪಾತ ನಡೆಸಿದ್ದಾರೆ. ಗಣಿ ಪ್ರದೇಶವೊಂದರ ಮೇಲೆ ದಾಳಿ ನಡೆಸಿದ ಉಗ್ರರು, ಅಲ್ಲಿ ಕೆಲಸ ಮಾಡುತ್ತಿದ್ದ ಒಂಬತ್ತು ಮಂದಿ ಕಾರ್ಮಿಕರನ್ನು ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದಾರೆ.
ಬಲೂಚಿಸ್ತಾನದ ದುಕ್ಕಿ ಜಿಲ್ಲೆಯ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ತಡರಾತ್ರಿ ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ಬಂದ ಉಗ್ರರ ಗುಂಪು, ಕಾರ್ಮಿಕರು ವಿಶ್ರಮಿಸುತ್ತಿದ್ದ ಸ್ಥಳವನ್ನು ಸುತ್ತುವರಿದು ಮನಬಂದಂತೆ ಗುಂಡಿನ ಮಳೆಗರೆದಿದ್ದಾರೆ. ದಾಳಿಕೋರರು ಹ್ಯಾಂಡ್ ಗ್ರೆನೇಡ್‌ಗಳನ್ನು ಸಹ ಬಳಸಿದ್ದು, ಗಣಿಗಾರಿಕೆ ಉದ್ದೇಶಕ್ಕೆ ಬಳಸುತ್ತಿದ್ದ ಯಂತ್ರೋಪಕರಣಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಕಾರ್ಮಿಕರೆಲ್ಲರೂ ಪಾಕಿಸ್ತಾನದ ವಿವಿಧ ಭಾಗಗಳಿಂದ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಉಗ್ರರು ಪ್ರಮುಖವಾಗಿ ಹೊರಪ್ರದೇಶದ ಕಾರ್ಮಿಕರನ್ನೇ ಗುರಿ ಮಾಡಿಕೊಂಡಿದ್ದರು.ದಾಳಿಯಲ್ಲಿ ಕನಿಷ್ಠ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ.
ಈವರೆಗೆ ಯಾವುದೇ ಉಗ್ರಗಾಮಿ ಸಂಘಟನೆಯು ಅಧಿಕೃತವಾಗಿ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೂ, ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ‘ಬಲೂಚಿಸ್ತಾನ್ ಲಿಬರೇಶನ್ ಆರ್ಮಿ’ (BLA) ಇಂತಹ ದಾಳಿಗಳನ್ನು ನಡೆಸುತ್ತಾ ಬಂದಿದೆ ಎಂದು ಶಂಕಿಸಲಾಗಿದೆ.








