ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ಭಾಗದಲ್ಲಿ ಉದ್ವಿಗ್ನತೆ ಮಿತಿಮೀರಿದ್ದು, ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಗಡಿಯುದ್ದಕ್ಕೂ ಭಾರಿ ವೈಮಾನಿಕ ದಾಳಿ (Airstrikes) ನಡೆಸಿದೆ. ಪಾಕಿಸ್ತಾನದೊಳಗೆ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಅಫ್ಘಾನಿಸ್ತಾನದ ನೆಲ ಬಳಕೆಯಾಗುತ್ತಿದೆ ಎಂದು ಆರೋಪಿಸಿರುವ ಪಾಕ್ ಸೇನೆ, ಗಡಿ ದಾಟಿ ಗುಂಡಿನ ಮಳೆಗರೆದಿದೆ.
ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಪೆಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿರುವ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಕೆಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಪಾಕಿಸ್ತಾನದ ಈ ಕ್ರಮವನ್ನು ಅಫ್ಘಾನಿಸ್ತಾನವನ್ನು ಆಳುತ್ತಿರುವ ತಾಲಿಬಾನ್ ಸರ್ಕಾರ ತೀವ್ರವಾಗಿ ಖಂಡಿಸಿದೆ. “ಇದು ನಮ್ಮ ಸಾರ್ವಭೌಮತ್ವದ ಮೇಲಿನ ದಾಳಿ. ಇಂತಹ ಕೃತ್ಯಗಳು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ತಾಲಿಬಾನ್ ವಕ್ತಾರರು ಎಚ್ಚರಿಸಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿರುವ ತಾಲಿಬಾನ್ ಆಡಳಿತವು, ಸಂಘರ್ಷವನ್ನು ಕೂಡಲೇ ನಿಲ್ಲಿಸುವಂತೆ ಮತ್ತು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಿದೆ.








