ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಅಸ್ಥಿರ ಭದ್ರತಾ ಪರಿಸ್ಥಿತಿಯ ನಡುವೆ, ಫೆಬ್ರವರಿ 28 ರಿಂದ ಈವರೆಗೆ ಸುಮಾರು 12,12,000 ಪ್ರಯಾಣಿಕರು ಆ ಭಾಗದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್. ಮಹಾಜನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಂಘರ್ಷದ ನಡುವೆಯೂ ಭಾರತೀಯರ ಸುರಕ್ಷಿತ ವಾಪಸಾತಿ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ಯುಎಇ (UAE) ಮತ್ತು ಭಾರತದ ನಡುವೆ ಸೀಮಿತ ವಾಣಿಜ್ಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಕೇವಲ ಗುರುವಾರವೊಂದೇ ಸುಮಾರು 110 ವಿಮಾನಗಳು ಸಂಚರಿಸುವ ನಿರೀಕ್ಷೆಯಿದೆ. ಕತಾರ್ ಏರ್ವೇಸ್ ಕೂಡ ಭಾರತಕ್ಕೆ ವಿಮಾನ ಸೇವೆ ಮುಂದುವರಿಸಿದೆ.
ಕುವೈತ್ ವೈಮಾನಿಕ ವಲಯ ಮುಚ್ಚಿರುವುದರಿಂದ, ಸೌದಿ ಅರೇಬಿಯಾದ ದಮ್ಮಾಮ್ ಮೂಲಕ ಭಾರತೀಯರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಇರಾನ್ನಲ್ಲಿರುವ ಭಾರತೀಯರನ್ನು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಕರೆತರಲಾಗುತ್ತಿದೆ.
ಇರಾಕ್ನಲ್ಲಿ ಸಿಲುಕಿಕೊಂಡಿದ್ದ 12 ಭಾರತೀಯ ನಾವಿಕರನ್ನು ಯಶಸ್ವಿಯಾಗಿ ರಕ್ಷಿಸಿ ಮುಂಬೈಗೆ ಕರೆತರಲಾಗಿದೆ. ಸಮುದ್ರದಲ್ಲಿರುವ ಭಾರತೀಯ ನಾವಿಕರ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಅನಿವಾಸಿ ಭಾರತೀಯರು ಮತ್ತು ಅವರ ಕುಟುಂಬದವರಿಗೆ ನೆರವಾಗಲು ವಿಶೇಷ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.








