ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (West Asia) ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ತನ್ನ ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ. ಕಳೆದ ಫೆಬ್ರವರಿ 28 ರಿಂದ ಇಲ್ಲಿಯವರೆಗೆ ಸುಮಾರು 11.6 ಲಕ್ಷಕ್ಕೂ ಹೆಚ್ಚು ಭಾರತೀಯರು ಸಂಘರ್ಷ ಪೀಡಿತ ಪ್ರದೇಶಗಳಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ಈ ಕಾರ್ಯಾಚರಣೆಯ ಮತ್ತೊಂದು ದೊಡ್ಡ ಯಶಸ್ಸೆಂದರೆ, ಇರಾಕ್‌ನಲ್ಲಿ ಸಂಘರ್ಷದ ಕಾರಣದಿಂದ ಸಿಲುಕಿಕೊಂಡಿದ್ದ 12 ಮಂದಿ ಭಾರತೀಯ ನಾವಿಕರನ್ನು (Seafarers) ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇರಾಕ್‌ನ ವಾಯುಪ್ರದೇಶವು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದರಿಂದ ಇವರು ಅಲ್ಲಿಯೇ ಸಿಲುಕಿದ್ದರು.ವಾಯುಪ್ರದೇಶ ತೆರೆದ ತಕ್ಷಣ, ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ದಾಖಲೆಗಳನ್ನು ಪೂರೈಸಿ ಅವರನ್ನು ಮುಂಬೈಗೆ ಕರೆತರಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಆರ್. ಮಹಾಜನ್ ಅವರು ಈ ಕುರಿತು ಮಾಹಿತಿ ನೀಡಿದ್ದು, “ನಮ್ಮ ನಾಗರಿಕರ, ವಿಶೇಷವಾಗಿ ನಾವಿಕರ ಕ್ಷೇಮಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಸ್ಥಳೀಯ ಬಂದರು ಪ್ರಾಧಿಕಾರಗಳು ಮತ್ತು ಕಡಲ ಏಜೆನ್ಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲರಿಗೂ ಅಗತ್ಯ ನೆರವು ನೀಡಲಾಗುತ್ತಿದೆ,” ಎಂದು ತಿಳಿಸಿದ್ದಾರೆ.








