ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು “ಪಕ್ಷಪಾತ ಧೋರಣೆ” ತಳೆದಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು, ಅವರನ್ನು ಅಧಿಕಾರದಿಂದ ತೆಗೆದುಹಾಕುವಂತೆ ಒತ್ತಾಯಿಸಿ ರಾಜ್ಯಸಭೆಯಲ್ಲಿ ಹೊಸದಾಗಿ ನೋಟಿಸ್ ಸಲ್ಲಿಸಿವೆ. ಒಟ್ಟು 11 ಪ್ರತಿಪಕ್ಷಗಳ 73 ರಾಜ್ಯಸಭಾ ಸಂಸದರು ಈ ನೋಟಿಸ್‌ಗೆ ಸಹಿ ಹಾಕುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ಟಿಎಂಸಿ ನಾಯಕಿ ಸಾಗರಿಕಾ ಘೋಷ್ ನೇತೃತ್ವದಲ್ಲಿ ಸಲ್ಲಿಸಲಾದ ಈ 13 ಪುಟಗಳ ನೋಟಿಸ್‌ನಲ್ಲಿ, ಜ್ಞಾನೇಶ್ ಕುಮಾರ್ ವಿರುದ್ಧ ಒಟ್ಟು 9 ನಿರ್ದಿಷ್ಟ ಆರೋಪಗಳನ್ನು ಹೊರಿಸಲಾಗಿದೆ.
ಏಪ್ರಿಲ್ 18 ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವು ಚುನಾವಣಾ ನೀತಿ ಸಂಹಿತೆಯ (MCC) ಉಲ್ಲಂಘನೆಯಾಗಿದ್ದರೂ, ಸಿಇಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಆಡಳಿತ ಪಕ್ಷದ ನಾಯಕರ ವಿರುದ್ಧದ ದೂರುಗಳನ್ನು ನಿರ್ಲಕ್ಷಿಸಿ, ಪ್ರತಿಪಕ್ಷಗಳ ನಾಯಕರ ಮೇಲೆ ಮಾತ್ರ ಚುನಾವಣಾ ಆಯೋಗವು ಕಠಿಣ ಕ್ರಮ ಜರುಗಿಸುತ್ತಿದೆ ಎಂಬುದು ಸಂಸದರ ಪ್ರಮುಖ ದೂರು.ಸಂವಿಧಾನದ ವಿಧಿ 324(5) ಮತ್ತು 124(4) ರ ಅಡಿಯಲ್ಲಿ ಈ ಪದಚ್ಯುತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಈ ನೋಟಿಸ್ ನೀಡಲಾಗಿದೆ.








