ಬೆಂಗಳೂರು : ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಪತಿ ಪ್ರಸ್ತುತ ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ಪಾವತಿಸಲು ನಿರ್ದೇಶಿಸಿರುವ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಕೆ.ಮನ್ಮಧರಾವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ನಿರುದ್ಯೋಗಿ ಎಂಬ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ. ದುಡಿಯುವ ಶಕ್ತಿಯುಳ್ಳ ಪತಿ ಕಾನೂನುಬದ್ಧ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪತ್ನಿ ಉದ್ಯೋಗದಲ್ಲಿದ್ದರೂ, ಪತಿಯ ಆದಾಯ ಗಳಿಸುವ ಸಾಮರ್ಥ್ಯವನ್ನು ಪರಿಗಣಿಸಿ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹಾಗೂ ಬಾಕಿ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿಸಲು ಸೂಚಿಸಿದೆ.
ಪತಿ ಪರ ವಕೀಲರು, ಪತಿ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಕಾರಣಾಂತರಗಳಿಂದ ಉದ್ಯೋಗ ಕಳೆದುಕೊಂಡಿದ್ದರು. ಪ್ರಸ್ತುತ ನಿರುದ್ಯೋಗಿಯಾಗಿದ್ದು ಉಳಿತಾಯ ಮತ್ತು ಪೋಷಕರ ಪಿಂಚಣಿಯ ಮೇಲೆ ಬದುಕುತ್ತಿದ್ದಾರೆ. ಅಲ್ಲದೆ, ಪತ್ನಿ ಮಲೇಷ್ಯಾದ ಸನ್ವೇ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಪಡೆದು 2023 ರ ಜನವರಿಯಿಂದ ತಿಂಗಳಿಗೆ 40 ಸಾವಿರಕ್ಕೂ ಅಧಿಕ ಸಂಬಳ ಪಡೆಯುತ್ತಿದ್ದಾರೆ. ಅವರ ತಾಯಿ ಪಿಂಚಣಿದಾರರಾಗಿದ್ದು, ಯಾರೂ ಅವರನ್ನು ಅವಲಂಬಿಸಿಲ್ಲ ಎಂದರು.
ಅದಕ್ಕೆ ಆಕ್ಷೇಪಿಸಿದ ಪತ್ನಿಯ ಪರ ವಕೀಲರು, ”ಪತ್ನಿ ವೈವಾಹಿಕ ಜೀವನದಲ್ಲಿ ಹಿಂಸೆಗೊಳಗಾಗಿದ್ದರು. ಜತೆಗೆ ಬೆದರಿಕೆಯೂ ಇತ್ತು. ಪತಿಯು ತಿಂಗಳಿಗೆ 4.5 ಲಕ್ಷ ರೂಪಾಯಿ ಆದಾಯ ಹೊಂದಿದ್ದರು ಹಾಗೂ ಬೆಂಗಳೂರಿನ ಯಲಹಂಕದಲ್ಲಿಮನೆ ಮತ್ತು ಯುಕೆಯಲ್ಲಿ ಎರಡು ಆಸ್ತಿಗಳನ್ನು ಹೊಂದಿದ್ದಾರೆ. ಪತಿ ಈಗಾಗಲೇ ಸುಮಾರು 66 ಲಕ್ಷಕ್ಕೂ ಅಧಿಕ ತೆರಿಗೆ ಪಾವತಿಸಿದ್ದಾರೆ. ಅಲ್ಲದೆ ಕಳೆದ 2022ರ ಮೇ ತಿಂಗಳಿನಿಂದ ಯಾವುದೇ ಪರಿಹಾರ ನೀಡಿಲ್ಲ,” ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ
ಅರ್ಜಿದಾರರ ಪತಿ ಮತ್ತು ಪ್ರತಿವಾದಿ ಪತ್ನಿ 2021ರಲ್ಲಿ ಧಾರವಾಡದಲ್ಲಿ ವಿವಾಹವಾಗಿದ್ದರು. ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ 2022ರಲ್ಲಿ ಪ್ರತ್ಯೇಕವಾಗಿದ್ದರು. ಬಳಿಕ ಮಾಸಿಕ 70 ಸಾವಿರ ಜೀವನಾಂಶ ಕೋರಿ ಪತ್ನಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಮಾಸಿಕ 20 ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.
ಪತ್ನಿ 70 ಸಾವಿರ ಜೀವನಾಂಶ ಕೇಳಿದ್ದರೂ, ಕೌಟುಂಬಿಕ ನ್ಯಾಯಾಲಯ 20 ಸಾವಿರ ಮೊತ್ತವನ್ನು ಮಂಜೂರು ಮಾಡಿದೆ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಬೇಕೆಂಬ ಅಂಶ ಕಾಣುತ್ತಿಲ್ಲ” ಎಂದು ಅಭಿಪ್ರಾಯಪಟ್ಟ ಪೀಠ, ಈವರೆಗೂ ಬಾಕಿ ಉಳಿದಿರುವ ಜೀವನಾಂಶದ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿಸಬೇಕು, ಎಂದು ನಿರ್ದೇಶಿಸಿ ಅರ್ಜಿ ವಜಾಗೊಳಿಸಿದೆ.








