ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜೈಲು ಜೀವನದ ಕುರಿತು ಇದೀಗ ಅತ್ಯಂತ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಇಬ್ಬರ ದೈನಂದಿನ ದಿನಚರಿಯಲ್ಲಿ ಭಾರಿ ಬದಲಾವಣೆಗಳಾಗಿದ್ದು, ಇಬ್ಬರೂ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ವಿಭಿನ್ನ ಹಾದಿ ತುಳಿದಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.
ಖೈದಿ ನಂಬರ್ ಬೆನ್ನಿಗಂಟಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುಪ್ರೀಂಕೋರ್ಟ್‌ನಲ್ಲಿ ತಮಗೆ ಜಾಮೀನು ಸಿಗಬಹುದು ಎಂಬ ಭಾರಿ ನಿರೀಕ್ಷೆಯಲ್ಲಿದ್ದರು. ಆದರೆ ಅಲ್ಲಿಯೂ ಜಾಮೀನು ಕೈತಪ್ಪಿದ ಬಳಿಕ ನಟ ತೀವ್ರ ನಿರಾಶೆಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಜೈಲಿನಲ್ಲಿ ಯಾರೊಂದಿಗೂ ಅಷ್ಟಾಗಿ ಮಾತನಾಡದೆ, ಸಂಪೂರ್ಣ ಮೌನಕ್ಕೆ ಶರಣಾಗಿರುವ ಅವರು ತೀವ್ರ ಯೋಚನೆಯಲ್ಲಿ ಮುಳುಗಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ದರ್ಶನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂಕೋರ್ಟ್ ಸದ್ಯಕ್ಕೆ ಅವರಿಗೆ ರಿಲೀಫ್ ನೀಡಲು ನಿರಾಕರಿಸಿದೆ. ಬದಲಾಗಿ, ಮುಂದಿನ ಒಂದು ವರ್ಷದ ಒಳಗೆ ಈ ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಕೆಳ ಹಂತದ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ಗಡುವು ನೀಡಿದೆ. ಒಂದೊಮ್ಮೆ ನಿಗದಿತ ಒಂದು ವರ್ಷದ ಅವಧಿಯಲ್ಲಿ ವಿಚಾರಣೆ ಮುಗಿಯದೇ ಇದ್ದರೆ, ಆ ಬಳಿಕವಷ್ಟೇ ದರ್ಶನ್ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಆದೇಶ ದರ್ಶನ್ ಪಾಲಿಗೆ ದೊಡ್ಡ ಆಘಾತ ತಂದಿದೆ.
ಇತ್ತ ನಟ ದರ್ಶನ್ ಮೌನಕ್ಕೆ ಶರಣಾಗಿದ್ದರೆ, ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಕಥೆಯೇ ಬೇರೆಯಾಗಿದೆ. ಜೈಲಿನ ಕಂಬಿ ಎಣಿಸುತ್ತಿರುವ ಪವಿತ್ರಾ ಗೌಡ, ಕಳೆದ ಒಂದು ತಿಂಗಳಿಂದ ಬಿಳಿ ಹಾಳೆ ಮತ್ತು ಪೆನ್ಸಿಲ್ ಹಿಡಿದು ತಮ್ಮ ಆತ್ಮಚರಿತ್ರೆ (ಆಟೋಬಯಾಗ್ರಫಿ) ಬರೆಯುವಲ್ಲಿ ಮಗ್ನರಾಗಿದ್ದಾರೆ. ಜೈಲಿನ ಒಂಟಿತನವನ್ನು ದೂರ ಮಾಡಿಕೊಳ್ಳಲು ಹಾಗೂ ಸಮಯ ಕಳೆಯಲು ಅವರು ಈ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.
ತಮ್ಮ ಆತ್ಮಚರಿತ್ರೆಯಲ್ಲಿ ಪವಿತ್ರಾ ಗೌಡ ಅವರು ‘ತಾನು ಯಾರು?, ತನ್ನ ಹಿನ್ನೆಲೆ ಏನು?, ತನ್ನ ಬದುಕು ಈ ಹಿಂದೆ ಹೇಗಿತ್ತು ಹಾಗೂ ವೈಯಕ್ತಿಕ ಜೀವನದಲ್ಲಿ ತಾನು ಏನೆಲ್ಲಾ ಮಾಡಿದ್ದೇನೆ?’ ಎಂಬುದನ್ನು ವಿವರವಾಗಿ ಬರೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಜೈಲಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಭ್ಯಾಸದ ತರಗತಿಗಳಿಗೂ ಹಾಜರಾಗದೇ, ಅವರು ತಮ್ಮ ಜೈಲಿನ ಕೋಣೆಯಲ್ಲೇ ಕುಳಿತು ಮೌನವಾಗಿ ಬರೆಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.








