ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನ ಬಿಡುಗಡೆಯಲ್ಲಿ ಯಾವುದೇ ರೀತಿಯ ಉದ್ದೇಶಪೂರ್ವಕ ತಾರತಮ್ಯ ಎಸಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಇಲಾಖೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಮನವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಆ ಸಮುದಾಯಕ್ಕೆ ಹೆಚ್ಚು ಅನುದಾನ ಸಂದಾಯವಾಗಿದೆಯೇ ಹೊರತು, ಇದರ ಹಿಂದೆ ಯಾವುದೇ ಪಕ್ಷಪಾತ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿವಿಧ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ನೀಡಿರುವ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಸದ್ಯ ಸುಮಾರು 155 ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳಿಗೆ ಒಟ್ಟು 71.85 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಪೂರ್ವಭಾವಿ ಮಂಜೂರಾತಿಯನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
“ಈಗ ಬಿಡುಗಡೆಯಾಗಿರುವುದು ಫಲಾನುಭವಿಗಳ ಅಂತಿಮ ಪಟ್ಟಿಯಲ್ಲ. ಬೇರೆ ಬೇರೆ ಹಿಂದುಳಿದ ಜಾತಿಗಳು ನೀಡಿರುವ ಮನವಿಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಅವರಿಗೂ ಅನುದಾನ ಬಿಡುಗಡೆ ಮಾಡಲಾಗುವುದು.” ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ಯೋಜನೆಯಡಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಆದ್ಯತೆ ನೀಡಲಾಗಿಲ್ಲ. ಕುರುಬ ಜನಾಂಗದ ಜೊತೆಗೆ ಮಡಿವಾಳ, ಲಿಂಗಾಯಿತ, ಒಕ್ಕಲಿಗ, ಬೆಸ್ತ, ಬಲಿಜ, ಗೊಲ್ಲ, ಜೆಟ್ಟಿ, ಕುಂಬಾರ, ಅರಸು, ಹೆಳವ, ಸವಿತಾ ಸಮಾಜ, ಉಪ್ಪಾರ, ಗಾಣಿಗ, ಕುರುಹಿನ ಶೆಟ್ಟಿ, ಹಾಲಕ್ಕಿ ಹಾಗೂ ರೆಡ್ಡಿ ಸೇರಿದಂತೆ ವಿವಿಧ ಜನಾಂಗದವರ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ಕಟ್ಟಡಗಳ ನಿರ್ಮಾಣಕ್ಕೂ ಪೂರ್ವಭಾವಿ ಆದೇಶ ಹೊರಡಿಸಲಾಗಿದೆ ಎಂದು ಅವರು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಸ್ತುತ ಹೊರಡಿಸಿರುವ ಆದೇಶವು ಕೇವಲ ಪೂರ್ವಭಾವಿ ಮಂಜೂರಾತಿಯಾಗಿದ್ದು, ಇದು ನೇರ ಹಣ ಬಿಡುಗಡೆಯ ಆದೇಶವಲ್ಲ ಎಂದು ಮಾಜಿ ಸಿಎಂ ವಿವರಿಸಿದ್ದಾರೆ. ಅನುದಾನ ಪಡೆಯಲು ಸಂಘ-ಸಂಸ್ಥೆಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಿವೇಶನವು ಸಂಘದ ಹೆಸರಿನಲ್ಲಿರುವ ಬಗ್ಗೆ ಸ್ಥಳೀಯ ಪುರಸಭೆ ಅಥವಾ ಪಂಚಾಯತಿಯಿಂದ ಪಡೆದ ಕಟ್ಟಡ ಲೈಸೆನ್ಸ್ ಮತ್ತು ಸಂಘದ ಕಳೆದ 3 ವರ್ಷಗಳ ಆಡಿಟ್ ವರದಿಯನ್ನು ಇಲಾಖೆಗೆ ಕಳುಹಿಸುವುದು ಕಡ್ಡಾಯವಾಗಿದೆ.
ಅನುದಾನ ಬಿಡುಗಡೆಗೆ ಸರ್ಕಾರವು ಈಗಾಗಲೇ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ನಿಯಮಾವಳಿಗಳ ಪ್ರಕಾರ, ಕಾಮಗಾರಿಯ ಪ್ರಗತಿಯನ್ನು ಒಟ್ಟು 3 ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಹಣವನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಪ್ರತಿ ವರ್ಷ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಮಂಜೂರಾಗಿರುವ ಮೊತ್ತವನ್ನು ಮುಕ್ತಾಯಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ವಿವರಣೆ ನೀಡಿದ್ದಾರೆ.








