ನವದೆಹಲಿ:ಕೈಲಾಸ ಮಾನಸಸರೋವರ ಯಾತ್ರಾ ಮಾರ್ಗಕ್ಕೆ ಸಂಬಂಧಿಸಿದಂತೆ ನೇಪಾಳದ ವಿದೇಶಾಂಗ ಸಚಿವಾಲಯ ಮಾಡಿರುವ ಕಾಮೆಂಟ್‌ಗಳಿಗೆ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಉತ್ತರಿಸಿದ್ದಾರೆ. ಈ ಕುರಿತು ಭಾರತದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಲಿಪುಲೇಖ್ ಪಾಸ್ 1954 ರಿಂದಲೂ ಕೈಲಾಸ ಮಾನಸಸರೋವರ ಯಾತ್ರೆಗೆ ಸುದೀರ್ಘಕಾಲದ ಮಾರ್ಗವಾಗಿದೆ. ದಶಕಗಳಿಂದ ಈ ಮಾರ್ಗದ ಮೂಲಕ ಯಾತ್ರೆ ನಡೆಯುತ್ತಿದೆ. ಇದೇನೂ ಹೊಸ ಬೆಳವಣಿಗೆಯಲ್ಲ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.
ಪ್ರಾದೇಶಿಕ ಹಕ್ಕುಗಳ ಕುರಿತು ನೇಪಾಳದ ವಾದವು ಸಮರ್ಥನೀಯವಲ್ಲ ಅಥವಾ ಅದು ಐತಿಹಾಸಿಕ ಸತ್ಯಗಳು ಮತ್ತು ಪುರಾವೆಗಳನ್ನು ಆಧರಿಸಿಲ್ಲ. ಇಂತಹ ಏಕಪಕ್ಷೀಯ ಕೃತಕ ವಿಸ್ತರಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
ವಿವಾದದ ನಡುವೆಯೂ, ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ವಿಷಯಗಳ ಬಗ್ಗೆ ನೇಪಾಳದೊಂದಿಗೆ ರಚನಾತ್ಮಕ ಸಂವಾದ ನಡೆಸಲು ಭಾರತ ಸಿದ್ಧವಿದೆ. ರಾಜತಾಂತ್ರಿಕ ಚರ್ಚೆ ಮತ್ತು ಸಂವಾದದ ಮೂಲಕ ಉಳಿದಿರುವ ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭಾರತ ಮುಕ್ತವಾಗಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.








