ಟೆಹ್ರಾನ್: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮತ್ತು ಸಂಭಾವ್ಯ ಉತ್ತರಾಧಿಕಾರಿ ಎಂದೇ ಪರಿಗಣಿಸಲಾದ ಮೊಜ್ತಬಾ ಖಮೇನಿ ಅವರು ಭೀಕರ ಅಗ್ನಿ ಅವಘಡವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅವರ ದೇಹದ ಹಲವು ಭಾಗಗಳು ಸುಟ್ಟುಹೋಗಿದ್ದು, ಚಿಕಿತ್ಸೆಗಾಗಿ ಅವರು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಮೊಜ್ತಬಾ ಅವರ ಮುಖ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಅವರ ಪ್ರಸ್ತುತ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ. ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಇರಾನ್ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದು ಕೇವಲ ಅಪಘಾತವೋ ಅಥವಾ ಯಾವುದಾದರೂ ವ್ಯವಸ್ಥಿತ ದಾಳಿಯ ಭಾಗವೋ ಎಂಬ ಬಗ್ಗೆ ಗೊಂದಲ ಮುಂದುವರಿದಿದೆ.
ಗಾಯಗಳ ತೀವ್ರತೆ ಹೆಚ್ಚಾಗಿರುವುದರಿಂದ, ಅವರ ಚರ್ಮದ ಮರುಸ್ಥಾಪನೆಗಾಗಿ ತಜ್ಞ ವೈದ್ಯರ ತಂಡವು ಪ್ಲಾಸ್ಟಿಕ್ ಸರ್ಜರಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಇರಾನ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ನಂತರದ ಸ್ಥಾನಕ್ಕೆ ಮೊಜ್ತಬಾ ಪ್ರಬಲ ಅಭ್ಯರ್ಥಿಯಾಗಿದ್ದರು. ಅವರ ಈ ಸ್ಥಿತಿಯು ಇರಾನ್‌ನ ಮುಂದಿನ ನಾಯಕತ್ವದ ಆಯ್ಕೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.








