ಶಿವಮೊಗ್ಗ: ಜಿಲ್ಲೆಯ ಅತ್ಯಂತ ಸೂಕ್ಷ್ಮ ಹಾಗೂ ದೀರ್ಘಕಾಲದ ಸಮಸ್ಯೆಯಾಗಿರುವ ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಮತ್ತು ಭೂಮಿ ಹಕ್ಕಿನ ವಿಚಾರವಾಗಿ ಶಿವಮೊಗ್ಗದ ತ್ರೈಮಾಸಿಕ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಹಾಗೂ ಗಂಭೀರ ಚರ್ಚೆ ನಡೆದಿದೆ. ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಸಂತ್ರಸ್ತರ ಆತಂಕವನ್ನು ದೂರ ಮಾಡಲು ಸಾಗರದ ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣವನ್ನು ವಿರೋಧಿಸುವಂತ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.
ಆತಂಕ ವ್ಯಕ್ತಪಡಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು:
ಸಭೆಯಲ್ಲಿ ಮಾತನಾಡಿದ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, “ಶರಾವತಿ ಮುಳುಗಡೆಯಾಗಿ ಈಗಾಗಲೇ ಒಂದಲ್ಲ, ಎರಡು ಬಾರಿ ನಿರಾಶ್ರಿತರಾಗಿರುವ ಜನರಿಗೆ ಇವತ್ತಿನವರೆಗೂ ಕಾಯಂ ಭೂಮಿ ಸಿಕ್ಕಿಲ್ಲ. ಈಗ ಸಾಗರದ ಬೇಸೂರಿನಲ್ಲಿ ಅಣು ಸ್ಥಾವರ ನಿರ್ಮಾಣದ ಸುದ್ದಿಯ ಬಳಿಕ ನಮ್ಮ ತಾಲೂಕಿನ ಸೂಕ್ಷ್ಮ ಪ್ರದೇಶದಲ್ಲಿರುವ ಜನರು ಇದರಿಂದಾಗಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಹಕ್ಕು ಅಥವಾ ಮತ್ತೊಂದು ಹೆಸರಿನಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಜನರು ದಿನನಿತ್ಯ ಸ್ಟ್ರೈಕ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕು ಕಟ್ಟಿಕೊಂಡ ಜಾಗದಿಂದ ಮತ್ತೆ ಎಲ್ಲಿ ಒಕ್ಕಲೆಬ್ಬಿಸುತ್ತಾರೋ ಎಂಬ ಹೆದರಿಕೆ ಅವರಲ್ಲಿದೆ. ಇದಕ್ಕೆ ಸರ್ಕಾರಿ ಮಟ್ಟದಲ್ಲಿ ಸ್ಪಷ್ಟವಾದ ತೀರ್ಮಾನವಾಗಬೇಕು,” ಎಂದು ಸಚಿವರ ಗಮನಕ್ಕೆ ತಂದರು.
ಜನರ ಬೆಂಬಲಕ್ಕೆ ನಿಂತ ಸಚಿವ ಮಧು ಬಂಗಾರಪ್ಪ:
ಜನಪ್ರತಿನಿಧಿಗಳ ಕಳಕಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, “ಈ ವಿಚಾರದಲ್ಲಿ ನಾವ್ಯಾರೂ ಜನರನ್ನು ಕೈಬಿಡುವುದಿಲ್ಲ. ನಾನಾಗಲಿ, ಅಥವಾ ನಮ್ಮ ಸರ್ಕಾರವಾಗಲಿ ಸಂತ್ರಸ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈಗಾಗಲೇ ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಲಾಗಿದೆ,” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳು:
ಚರ್ಚೆಯ ಅಂತ್ಯದಲ್ಲಿ ಸಚಿವರು ಹಾಗೂ ಸಭೆಯಲ್ಲಿದ್ದ ಸರ್ವ ಸದಸ್ಯರು ಈ ಕೆಳಗಿನ ಪ್ರಮುಖ ತೀರ್ಮಾನಗಳಿಗೆ ಒಪ್ಪಿಗೆ ಸೂಚಿಸಿದರು:
-
ಸರ್ವಾನುಮತದ ನಿರ್ಣಯ (Resolution): ಶರಾವತಿ ಸಂತ್ರಸ್ತರ ಪರವಾಗಿ ಶಿವಮೊಗ್ಗ ಜಿಲ್ಲಾ ಕೆಡಿಪಿ ಸಭೆಯಿಂದ ಸರ್ವಾನುಮತದ ನಿರ್ಣಯವನ್ನು ಪಾಸ್ ಮಾಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುವುದು. ಸಾಗರದ ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವ ನಿರ್ಮಾಣಕ್ಕೆ ವಿರೋಧಿ ನಿರ್ಣಯಕ್ಕೆ ಸರ್ವಾನುಮತದ ಒಪ್ಪಿಗೆ ನೀಡಲಾಯಿತು.
-
ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಶಿಫಾರಸು: ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪವರ್ ಜನರೇಷನ್ ಹಾಗೂ ಅರಣ್ಯ ಭೂಮಿ ನಿಯಮಗಳ ಸರಳೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಜಂಟಿಯಾಗಿ ಅಧಿಕೃತ ಪ್ರಸ್ತಾವನೆ ಹಾಗೂ ಶಿಫಾರಸನ್ನು ಕಳುಹಿಸಿಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
-
ಡಿಸಿ ಅವರಿಗೆ ಸೂಚನೆ: ಜಿಲ್ಲಾಧಿಕಾರಿಗಳು (DC) ಸಹ ಈ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಂದಕ್ಕೆ ಕೊಂಡೊಯ್ಯಲು ಅಗತ್ಯವಾದ ವರದಿಯನ್ನು ಸಿದ್ಧಪಡಿಸಬೇಕೆಂದು ಸೂಚಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇಸೂರಿನ ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಯವನ್ನು ಹೋಗಲಾಡಿಸಿ ಅವರಿಗೆ ಧೈರ್ಯ ತುಂಬುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕೆಡಿಪಿ ಸಭೆಯ ಈ ನಿರ್ಣಯವು ಸಂತ್ರಸ್ತರ ಹೋರಾಟಕ್ಕೆ ಕಾನೂನಾತ್ಮಕ ಬಲ ತರಲಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಬಿಎಂಟಿಸಿಯ ನೂತನ ಮಾರ್ಗದ ವೇಗದೂತ ಬಸ್ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ!








