ತುಮಕೂರು :ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದ್ದು, ಜೆಡಿಎಸ್ ಅಭ್ಯರ್ಥಿ ನಾಗರಾಜ್ ಅವರು ಹಾಲಿ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ಅವರ ಪುತ್ರ ದುಷ್ಯಂತ್ ವಿರುದ್ಧ ಅತ್ಯಂತ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ತಮ್ಮನ್ನು ರಾಜಕೀಯವಾಗಿ ಮುಗಿಸಲು ಮತ್ತು ಮುಂಬರುವ ಚುನಾವಣೆಯಲ್ಲಿ ಸೋಲಿಸಲು ತಮಗೆ ‘ಹನಿಟ್ರ್ಯಾಪ್’ ಮಾಡಲು ಸಂಚು ರೂಪಿಸಲಾಗಿತ್ತು ಎಂದು ನಾಗರಾಜ್ ಆಪಾದಿಸಿದ್ದಾರೆ. ಈ ಆಘಾತಕಾರಿ ಆರೋಪವು ಜಿಲ್ಲಾ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ತಮ್ಮ ಆರೋಪಕ್ಕೆ ಪುಷ್ಟಿ ನೀಡುವಂತೆ ಜೆಡಿಎಸ್ ಅಭ್ಯರ್ಥಿ ನಾಗರಾಜ್ ಅವರು ಆಡಿಯೋ ರೆಕಾರ್ಡಿಂಗ್ ಒಂದನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ಶಾಸಕ ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ಅವರು ಮತ್ತೊಬ್ಬ ವ್ಯಕ್ತಿಯ ಜೊತೆ ಮಾತನಾಡಿದ್ದಾರೆ ಎನ್ನಲಾಗಿದ್ದು, ನಾಗರಾಜ್ ಅವರನ್ನು ಹೇಗೆ ಸಿಲುಕಿಸಬೇಕು ಎಂಬ ಕುರಿತು ಚರ್ಚ ನಡೆಸಿರುವುದು ಕೇಳಿಬಂದಿದೆ ಎನ್ನಲಾಗಿದೆ. ಈ ಆಡಿಯೋ ಸಿಡಿ ಈಗ ಗುಬ್ಬಿ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತುಮಕೂರಿನ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗರಾಜು, “ನನ್ನನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸುವ ವ್ಯವಸ್ಥಿತ ಪ್ರಯತ್ನಗಳು ನಡೆದಿವೆ. ಚುನಾವಣೆಯಲ್ಲಿ ನನ್ನನ್ನು ನೇರವಾಗಿ ಎದುರಿಸಲು ಸಾಧ್ಯವಾಗದೇ, ಈಗಿನಿಂದಲೇ ಇಂತಹ ಕೀಳು ಮಟ್ಟದ ಕುತಂತ್ರಗಳನ್ನು ನಡೆಸುತ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ್ದಾರೆ. ಎದುರಾಳಿಗಳು ರಾಜಕೀಯ ದ್ವೇಷ ಸಾಧಿಸಲು ನನ್ನ ತೇಜೋವಧೆಗೆ ಇಳಿದಿದ್ದಾರೆ ಎಂದು ಅವರು ದೂರಿದ್ದಾರೆ.
ವಿರೋಧಿಗಳ ಯಾವುದೇ ತಂತ್ರಗಳಿಗೆ ತಾವು ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಾಗರಾಜ್, ಈ ಹನಿಟ್ರ್ಯಾಪ್ ಸಂಚಿನ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನತೆಗೆ ವಾಸ್ತವ ಏನೆಂದು ತಿಳಿಸಲು ಮತ್ತು ತಮ್ಮ ಮೇಲಿನ ಷಡ್ಯಂತ್ರವನ್ನು ಬಯಲಿಗೆಳೆಯಲು ತಾವು ಈ ಆಡಿಯೋವನ್ನು ಬಿಡುಗಡೆ ಮಾಡಿರುವುದಾಗಿ ಅವರು ತಿಳಿಸಿದ್ದು, ಈ ಕುರಿತು ಕಾನೂನು ಹೋರಾಟ ನಡೆಸುವ ಮುನ್ಸೂಚನೆಯನ್ನೂ ನೀಡಿದ್ದಾರೆ.








