ನವದೆಹಲಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷರು ಮತ್ತು ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ವೀರಶೈವ ಲಿಂಗಾಯತ ಸಮಾಜದ ಗಣ್ಯರಾಗಿ, ನಾಯಕರಾಗಿ ನಮಗೆಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದ ನೇರ ನುಡಿಯ ಶಾಮನೂರು ಶಿವಶಂಕರಪ್ಪ ಅವರು ಈ ಹಿಂದೆ ತೋಟಗಾರಿಕಾ ಸಚಿವರಾಗಿ ಮತ್ತು ಕೊಡುಗೈ ದಾನಿಯಾಗಿ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತವಾದ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಸಾವಿರಾರು ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದ ಶಾಮನೂರು ಅವರು ವೀರಶೈವ ಲಿಂಗಾಯತ ಸಮಾಜದ ಏಳಿಗೆಗಾಗಿ ಮತ್ತು ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದರು, ಅವರ ನಿಧನದಿಂದ ಒಬ್ಬ ಶ್ರೇಷ್ಠ ಮುತ್ಸದ್ದಿಯನ್ನು ಹಾಗೂ ಮಾರ್ಗದರ್ಶಕರನ್ನು ನಾವು ಕಳೆದುಕೊಂಡಿದ್ದೇವೆ ಎಂದು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ನಮ್ಮ ತಂದೆ ಭೀಮಣ್ಣ ಖಂಡ್ರೆ ಹಾಗೂ ತಮಗೆ ತುಂಬಾ ಆತ್ಮೀಯರಾಗಿದ್ದರು ಅವರ ನಿಧನದಿಂದ ಆಘಾತವಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಅತ್ಯಂತ ಹಿರಿಯ ಸದಸ್ಯರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ, ಈ ನೋವಿನ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಯಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಅವರ ಕುಟುಂಬದ ಎಲ್ಲರಿಗೂ ಶಾಮನೂರ್ ಅಣ್ಣನವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಸಾಗರ ತಾಲ್ಲೂಕಿನ ಹಲವೆಡೆ ‘ಮಂಗಗಳ ಸರಣಿ ಸಾವು’: ಹೆಚ್ಚಾದ ‘ಮಂಗನ ಕಾಯಿಲೆ’ ಆತಂಕ
‘ಡಿಜಿಟಲ್ ಅರೆಸ್ಟ್’ ವಂಚನೆ: 1 ಕೋಟಿ ರೂ. ಕಳೆದುಕೊಂಡ 82 ವರ್ಷದ ವ್ಯಕ್ತಿ | Digital arrest scam








