ಕ್ಯಾಲಿಫೋರ್ನಿಯಾ: ತಂತ್ರಜ್ಞಾನ ಲೋಕದ ದೈತ್ಯ ಸಂಸ್ಥೆ ‘ಮೆಟಾ’ (Meta) ತನ್ನ ಒಟ್ಟು ಕಾರ್ಯಪಡೆಯ ಶೇ. 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ಮೇ ತಿಂಗಳಲ್ಲಿ ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ. ಕೃತಕ ಬುದ್ಧಿಮತ್ತೆ (Artificial Intelligence – AI) ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಲು ಮತ್ತು ಕಂಪನಿಯ ದಕ್ಷತೆಯನ್ನು ಹೆಚ್ಚಿಸಲು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಮೇ 20 ರಿಂದ ಈ ಉದ್ಯೋಗ ಕಡಿತ ಪ್ರಕ್ರಿಯೆಯು ಅಧಿಕೃತವಾಗಿ ಆರಂಭವಾಗಲಿದ್ದು, ಜಾಗತಿಕವಾಗಿ ಮೆಟಾದ ವಿವಿಧ ವಿಭಾಗಗಳ ಮೇಲೆ ಇದು ಪರಿಣಾಮ ಬೀರಲಿದೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕಂಪನಿಯನ್ನು ಸಂಪೂರ್ಣವಾಗಿ AI ಆಧಾರಿತವಾಗಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಬಿಲಿಯನ್ ಗಟ್ಟಲೆ ಡಾಲರ್ ಹೂಡಿಕೆ ಮಾಡಲಾಗುತ್ತಿದ್ದು, ಈ ವೆಚ್ಚವನ್ನು ಸರಿದೂಗಿಸಲು ಮಾನವ ಸಂಪನ್ಮೂಲವನ್ನು ಕಡಿತಗೊಳಿಸಲಾಗುತ್ತಿದೆ.
ಕೇವಲ ಹಾಲಿ ಉದ್ಯೋಗಿಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ, ಈಗಾಗಲೇ ಭರ್ತಿ ಮಾಡಲು ಯೋಜಿಸಿದ್ದ ಸುಮಾರು 6,000 ಹೊಸ ಹುದ್ದೆಗಳನ್ನು ಸಹ ಮೆಟಾ ರದ್ದುಗೊಳಿಸಿದೆ.
ಪ್ರಮುಖವಾಗಿ ಸೇಲ್ಸ್, ರಿಕ್ರೂಟಿಂಗ್ (ನೇಮಕಾತಿ) ಮತ್ತು ಮಧ್ಯಮ ಹಂತದ ಮ್ಯಾನೇಜ್‌ಮೆಂಟ್ ವಿಭಾಗಗಳಲ್ಲಿ ಉದ್ಯೋಗ ಕಡಿತದ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗಿದೆ.








