ಮಂಡ್ಯ: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ದೂರು ದಾಖಲು ಮಾಡವಲ್ಲಿ ನಿರ್ಲಕ್ಷ್ಯ ವಹಿಸಿರುವ ಕೆ.ಎಂ.ದೊಡ್ಡಿ ಪೋಲೀಸರ ಕ್ರಮ ವಿರೋಧಿಸಿ ಮಾನವ ಹಕ್ಕುಗಳ ಸೇವಾ ಸಮಿತಿ ಕಾರ್ಯಕರ್ತರು ಗುರುವಾರ ಕೆ.ಎಂ.ದೊಡ್ಡಿ ಪೋಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷೆ ಕೆ.ಎಚ್.ಇಂದಿರಾ ನೇತೃತ್ವದಲ್ಲಿ ಕೆ.ಎಂ.ದೊಡ್ಡಿಯ ಮದ್ದೂರು – ಮಳವಳ್ಳಿ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿ, ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವಮಲ್ಲಯ್ಯ, ಪಿಎಸ್ಐ ರಾಮಸ್ವಾಮಿ, ಎಎಸ್ಐ ವೆಂಕಟೇಶ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ 40% ಸರ್ಕಾರ ಬೆಂಗಳೂರಿನ ಭೂಗಳ್ಳರ ಜೊತೆಯು ಶಾಮೀಲು: ಮಾಜಿ ಎಂಎಲ್ಸಿ ರಮೇಶ್ ಬಾಬು ಗಂಭೀರ ಆರೋಪ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಂದಿರಾ, ಈ ಪೋಲೀಸ್ ಅಧಿಕಾರಿಗಳು ಅಮಾಯಕ ಹೆಣ್ಣು ಮಕ್ಕಳ ಮೇಲೆ 107 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡುತ್ತಾರೆ. ಘಟನೆ ನಡೆದ ಸ್ಥಳದಲ್ಲಿ ಇರದ ಮಹಿಳೆಯರ ಮೇಲೂ ಸಹ ಇದೇ ರೀತಿಯ ಪ್ರಕರಣ ದಾಖಲು ಮಾಡಿಕೊಂಡು ಕಿರುಕುಳ ನೀಡುತ್ತಾರೆ. ಅಲ್ಲದೇ ಗಲಾಟೆಗಳು ನಡೆದ ಬಗ್ಗೆ ಸಾಕ್ಷಿ ಸಮೇತವಾಗಿ ದೂರು ನೀಡಿದರು ಸಹ ಅವರಿಂದ ಹಣ ವಸೂಲಿ ಮಾಡಿಕೊಂಡು ವಿಚಾರಣೆ ಮಾಡದೇ ದೂರಿನಿಂದ ಕೈಬಿಟ್ಟ ಪ್ರಕರಣಗಳು ನಡೆಯುತ್ತಿವೆ ಎಂದು ಪ್ರತಿಭಟನಾ ನೇತೃತ್ವ ವಹಿಸಿದ್ದ ಕಾರ್ಯಕರ್ತರು ಆರೋಪಿಸಿದರು.
ಕೆ.ಎಂ.ದೊಡ್ಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತಾಂತರ, ಗಾಂಜಾ ಮಾರಾಟ, ಮರಳು ದಂಧೆ, ಜೂಜು ದಂಧೆ ಹಾಗೂ ಕೊಲೆ ಪ್ರಕರಣಗಳು ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರು ಸಹ ದಂಧೆ ಕೊರರಿಂದ ನಿರಂತರವಾಗಿ ಮಾಮೂಲಿ ವಸೂಲಿ ಮಾಡಿಕೊಂಡು ದಂಧೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಹಿರಿಯ ಪೋಲಿಸ್ ಅಧಿಕಾರಿಗಳು ಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
BIG NEWS: ‘ಒಪ್ಪಂದದ ಮೇರೆ’ಗೆ ‘KSRTC ಬಸ್’ ಬುಕ್ ಮಾಡೋರಿಗೆ ಬಿಗ್ ಶಾಕ್: ದರ ಹೆಚ್ಚಳ | KSRTC Bus
ಠಾಣಾ ವ್ಯಾಪ್ತಿಯ ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣ ಹಾಗೂ ಅಕ್ರಮ ಮರಳು ದಂಧೆಯಲ್ಲಿ ಅಧಿಕಾರಿಗಳು ನೇರ ತಪ್ಪಿತಸ್ಥರಾಗಿದ್ದರು ಸಹ ಹಿರಿಯ ಅಧಿಕಾರಿಗಳು ಕೇವಲ ಪೋಲೀಸ್ ಪೇದೆಯನ್ನು ಮಾಹಿತಿ ಸಂಗ್ರಹಿಸಿಲ್ಲವೆಂಬ ಕಾರಣಕ್ಕೆ ಆತನನ್ನು ಅಮಾನತು ಮಾಡಿ ಕೈ ತೊಳೆದುಕೊಂಡಿರುವ ಹಿರಿಯ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ರಕ್ಷಣೆಗೆ ತೊಡಗಿರುವುದು ಅಧಿಕಾರಿಗಳ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ ಎಂದು ಇಂದಿರಾ ಗಂಭೀರ ಆರೋಪ ಮಾಡಿದರು.
ನಂತರ ಪ್ರತಿಭಟನಾಕಾರರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಸ್ಥಳಕ್ಕೆ ಬಂದು ಸರ್ಕಲ್ ಇನ್ಸ್ಪೆಕ್ಟರ್ ಶಿವಮಲ್ಲಯ್ಯ, ಪಿಎಸ್ಐ ರಾಮಸ್ವಾಮಿ ಹಾಗೂ ಎಎಸ್ಐ ವೆಂಕಟೇಶ್ ವಿರುದ್ಧ ತನಿಖೆ ನಡೆಸಿ ಅಮಾನತು ಮಾಡಬೇಕು ಅಲ್ಲಿಯವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಕೆ.ಎಂ.ದೊಡ್ಡಿ ಠಾಣೆಯ ಪೊಲೀಸ್ ವೈಫಲ್ಯ ಕುರಿತು ಮಾನವ ಹಕ್ಕುಗಳ ಸೇವಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮುನ್ಸೂಚನೆ ಅರಿತ ಠಾಣಾಧಿಕಾರಿಗಳು ಬಂದೋಬಸ್ತ್ ನೆಪವೊಡ್ಡಿ ಸಂಜೆಯಾದರೂ ಠಾಣೆ ಕಡೆ ತಲೆ ಹಾಕದೇ ನಾಪತ್ತೆ ಆಗಿದ್ದರು. ನಂತರ ಸಂಜೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದ ಮಾನವ ಹಕ್ಕುಗಳ ಸೇವಾ ಸಮಿತಿ ಕಾರ್ಯಕರ್ತರು ನಾಳೆ (ಶುಕ್ರವಾರ) ಮತ್ತೆ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿ ಸ್ಥಳದಿಂದ ತೆರಳಿದರು.
ಪ್ರತಿಭಟನೆಯಲ್ಲಿ ಶಶಿಕಲಾ, ರಾಧಾ, ಸುನಂದ, ಸರೋಜಮ್ಮ, ಲಕ್ಷ್ಮಿ, ಸುಲೋಚನಾ, ಗೀತಾ, ಗೌರಮ್ಮ, ಜಯರತ್ನ, ಸಾವಿತ್ರಮ್ಮ, ರಾಜಮ್ಮ, ಭಾಗ್ಯಮ್ಮ, ಮಂಚಮ್ಮ ಮತ್ತಿತ್ತರರು ಭಾಗವಹಿಸಿದ್ದರು.
ವರದಿ: ಗಿರೀಶ್ ರಾಜ್, ಮಂಡ್ಯ