ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗವಹಿಸಿದ್ದ ಹೈಪ್ರೊಫೈಲ್ ‘ಶ್ವೇತಭವನದ ವರದಿಗಾರರ ಔತಣಕೂಟ’ದಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿದೆ. ಅಧ್ಯಕ್ಷರನ್ನು ಹತ್ಯೆ ಮಾಡಲು ಸಂಚು ರೂಪಿಸಿ ಶಸ್ತ್ರಾಸ್ತ್ರಗಳೊಂದಿಗೆ ಕಾರ್ಯಕ್ರಮದ ಒಳಗೆ ನುಗ್ಗಲು ಯತ್ನಿಸಿದ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಟೊರೆನ್ಸ್ ನಿವಾಸಿ ಕೋಲ್ ಟೋಮಸ್ ಅಲೆನ್ (31) ಎಂಬಾತನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಅಮೆಚೂರ್ ವಿಡಿಯೋ ಗೇಮ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ಶನಿವಾರ (ಏಪ್ರಿಲ್ 25, 2026) ರಾತ್ರಿ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಔತಣಕೂಟ ನಡೆಯುತ್ತಿದ್ದಾಗ, ಅಲೆನ್ ಭದ್ರತಾ ತಪಾಸಣಾ ಕೇಂದ್ರವನ್ನು ದಾಟಿ ಒಳಗೆ ನುಗ್ಗಲು ಯತ್ನಿಸಿದ. ಆತನ ಬಳಿ ಶಾರ್ಟ್‌ಗನ್, ಪಿಸ್ತೂಲ್ ಮತ್ತು ಮೂರು ಚಾಕುಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಭದ್ರತಾ ಕವಚವನ್ನು ಭೇದಿಸಿ ನುಗ್ಗುತ್ತಿದ್ದಂತೆ ಎಚ್ಚೆತ್ತ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆತನನ್ನು ತಡೆದಿದ್ದಾರೆ. ಈ ವೇಳೆ ಒಂದು ಸುತ್ತಿನ ಗುಂಡು ಹಾರಾಟ ನಡೆದಿದ್ದು, ಓರ್ವ ಅಧಿಕಾರಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಆರೋಪಿಯನ್ನು ಸೆರೆಹಿಡಿಯಲಾಗಿದೆ.








