ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಸಂಪಿಗೆ ಬಾಲಕ ಬಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದನು. ಈ ಘಟನೆ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಗ್ಯ ಇಲಾಖೆ ( Karnataka Health Department ) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ.
ಈ ಸಂಬಂಧ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ಬಿಡುಗಡೆ ಮಾಡಿದ್ದು, ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು 24×7 ಆಸ್ಪತ್ರೆಯಾಗಿದೆ. ಹೀಗಾಗಿ ಘಟನೆ ನಡೆದಂತ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಗಳು ಒಬ್ಬರು ಹಾಗೂ ಗ್ರೂಪ್ ಡಿ ಇದ್ದರು. ಆದ್ರೇ ವೈದ್ಯರು ಕ್ಷೇತ್ರ ಭೇಟಿಗಾಗಿ ಮೈದನಹಳ್ಳಿಗೆ ತೆರಳಿದ್ದರು ಎಂದಿದೆ.
ಕೊಡಿಗೇನಹಳ್ಳಿಯ ಶೌಖತ್ ಎಂಬುವರ 5 ವರ್ಷದ ಮಗ ಸಂಜೆ 4.15ರ ವೇಳೆಗೆ ಸಂಪಿನಲ್ಲಿ ಬಿದ್ದಿರುವುದನ್ನು ನೋಡಿ, ಸಂಜೆ 5 ಗಂಟೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ, ಆಸ್ಪತ್ರೆಗೆ ಬರುವ ಮೊದಲೇ ಮರಣ ಹೊಂದಿರುತ್ತದೆ. ಆ ವೇಳೆ ವೈದ್ಯರು ಕ್ಷೇತ್ರ ಬೇಟಿಗೆ ತೆರಳಿದ್ದರೇ, ಶುಶ್ರೂಷಾಧಿಕಾರಿಗಳು ಕರ್ತವ್ಯದಲ್ಲಿದ್ದರು ಎಂದು ಹೇಳಿದ್ದಾರೆ.
ಘಟನೆ ನಡೆದ ವೇಳೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಮುಂಜಾಗ್ರತೆಯ ಕರ್ತವ್ಯದ ಮೇಲಿದ್ದ ಆಂಬುಲೆನ್ಸ್ ನಲ್ಲಿ ಲಭ್ಯವಿದ್ದ ಡಾ.ಪುರುಷೋತ್ತಮ ಫಿಜಿಷಿಯಲ್ ಇವರಿಗೆ ಮಾಹಿತಿ ನೀಡಲಾಗಿದೆ. ಅವರು ಆಸ್ಪತ್ರೆಯಲ್ಲಿನ ಬಾಲಕನನ್ನು ಪರೀಕ್ಷಿಸಿದ್ದಾರೆ. ಆಗ ಬಾಲಕ ಮೃತಪಟ್ಟಿರುತ್ತಾನೆ ಎಂದು ದೃಢೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆಗೆ ಅದೇ ಮಾರ್ಗವಾಗಿ ಬಂದಂತ ಮಾಜಿ ಸಿಎಂ ಕುಮಾರಸ್ವಾಮಿಯವರ ( Farmer CM HD Kumaraswamy ) ಬಳಿಗೆ ಬಾಲಕನನ್ನು ಕರೆದೊಯ್ದು ಪರಿಹಾರ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಈ ವಿಷಯ ತಿಳಿದು ಕೊಡಿಗೇನಹಳ್ಳಿ ಆಸ್ಪತ್ರೆಯ ವೈದ್ಯ ಡಾ.ರೋಹಿತ್ ತೆರಳಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲು ಕ್ರಮ ವಹಿಸಿದ್ದಾರೆ. ಈ ಘಟನೆ ಸಂಬಂಧ ಪರಿಶೀಲಿಸಿ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.