ಧಾರವಾಡ : ಲೋಕಸಭೆ ಚುನಾವಣೆಗೆ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಉಭಯ ಪಕ್ಷಗಳು ಕೂಡ ರಾಜ್ಯದಲ್ಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭರ್ಜರಿ ಪ್ರಚಾರ ಹಾಗೂ ಸಮಾವೇಶಗಳನ್ನು ನಡೆಸುತ್ತಿವೆ. ಇದಲ್ಲದೆ ಚುನಾವಣಾ ಆಯೋಗ ಕೂಡ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಅಧಿಕಾರಿಗಳನ್ನು ನೇಮಿಸಿದ್ದು, ಈಗಾಗಲೇ ಅಧಿಕಾರಿಗಳು ಕರ್ತವ್ಯನಿರತರಾಗಿದ್ದಾರೆ.
ಇದೀಗ ಧಾರವಾಡದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾ ಅಧಿಕಾರಿಯೊಬ್ಬರು ಹಠಾತ್ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.ಕೃಷ್ಣಮೂರ್ತಿ(52) ಮೃತ ದುರ್ದೈವಿ. ಕೃಷ್ಣಮೂರ್ತಿ ಅವರು ಹೆಸ್ಕಾಂ ಎ ಇ ಇ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಧಾರವಾಡ ಪಶ್ಚಿಮ ಕ್ಷೇತ್ರದ ಸೆಕ್ಟರ್ ಆಫೀಸರ್ ಆಗಿ ನಿಯೋಜನೆಗೊಂಡಿದ್ದರು. ಇಂದು ಮಧ್ಯಾಹ್ನ 1 ಗಂಟೆಗೆ ಕರ್ತವ್ಯದಲ್ಲಿದ್ದ ವೇಳೆ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಘಟನೆ ಮಾಹಿತಿ ಪಡೆದ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ದಿವ್ಯ ಪ್ರಭು ಸಂತಾಪ ಸೂಚಿಸಿದರು.