ಬೆಂಗಳೂರು: ರಾಜಕೀಯದಲ್ಲಿ ಎಷ್ಟೇ ಪ್ರೀತಿ- ವಿಶ್ವಾಸಗಳಿದ್ದರೂ ಹೊಂದಾಣಿಕೆಯ ನಾಟಕ ನನ್ನ ಬಳಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ವಿಧಾನಸೌಧದ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ವಾಚ್ ವಿಚಾರದಲ್ಲಿ ನನ್ನ ಹೇಳಿಕೆಯಿಂದ ಡಿ.ಕೆ.ಶಿವಕುಮಾರರಿಗೆ ಬೇಸರ ಆದರೆ ನಾನೇನೂ ಮಾಡಲಾಗದು ಎಂದು ಸ್ಪಷ್ಟಪಡಿಸಿದರು. ಈಗಲೂ ಅವರ ಹೂಬ್ಲೋಟ್ ವಾಚ್ ಕಾಣುತ್ತಿಲ್ಲ ಎಂದು ತಿಳಿಸಿದರು. ಅದು ಅಫಿಡವಿಟ್‍ನಲ್ಲಿಲ್ಲ. ಈಗ ನೀವು ಕಾರ್ಟಿಯರ್ ವಾಚ್ ವಿಚಾರವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೀರಿ. ಹಿಂದೆ ಅಫಿಡವಿಟ್‍ನಲ್ಲಿ ಕೊಟ್ಟಿಲ್ಲ; ಅದು ಕೂಡ ಅಪರಾಧವೇ ಎಂದು ಗಮನ ಸೆಳೆದರು.
ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಇದನ್ನು ಬಹಳ ಬೆಳೆಸಬೇಕೆಂಬುದು ನನ್ನ ಉದ್ದೇಶವಲ್ಲ; ಸಂದರ್ಭಕ್ಕೆ ತಕ್ಕಂತೆ ವಿಷಯವನ್ನು ಜನರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಶಿವಕುಮಾರರನ್ನು ಇವತ್ತಿನಿಂದ ನಾನು ನೋಡುತ್ತಿಲ್ಲ. ಕಾಲೇಜಿನಿಂದ ನೋಡುತ್ತ ಬಂದಿದ್ದೇನೆ. ಅವರ ಕಾಲೇಜಿನ ಸ್ನೇಹಿತರಲ್ಲಿ ನಾನೂ ಒಬ್ಬ. ಅವರು ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಆ ರೀತಿಯ ಸವಲತ್ತು ನಮಗಿದ್ದರೆ ನಾವೂ ಬೆಳೆಯಬಹುದಾಗಿತ್ತು ಎಂದು ನುಡಿದರು.
ನೀವು ನೂರು ವಾಚ್ ಕಟ್ಟಿದರೆ ನಾನು ಸ್ನೇಹಿತನಾಗಿ ಅತ್ಯಂತ ಖುಷಿ ಪಡುವೆ. ನೀವು ಅಫಿಡವಿಟ್‍ನಲ್ಲಿ ತಿಳಿಸಿದ್ದಾಗಿ ಹೇಳಿದ್ದೀರಿ. ಆದರೆ, ಅದನ್ನು ತಿಳಿಸಿಲ್ಲ ಎಂಬುದಷ್ಟೇ ನನ್ನ ಪ್ರಶ್ನೆ ಎಂದು ತಿಳಿಸಿದರು.
ನನಗೆ ಐದಾರು ಇಲ್ಲ. ನನಗಿರೋದು ಒಂದೇ; ಅದು ಟೈಟಾನ್
ಶಿವಕುಮಾರ್ ಅವರು ನನ್ನ ಉನ್ನತ ಹುದ್ದೆಗೂ ಗೌರವ ಕೊಡುವುದನ್ನು ಕಲಿಯಬೇಕಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಶಿವಕುಮಾರ್ ಮತ್ತು ನಾನು ಇವತ್ತಿನ ಸ್ನೇಹಿತರಲ್ಲ; ರಾಜಕೀಯ ಸ್ನೇಹಿತರಲ್ಲ. ನಾವು ಕಾಲೇಜಿನಿಂದಲೇ ಆತ್ಮೀಯ ಸ್ನೇಹಿತರು. ಇವತ್ತು ನೀವು ದೊಡ್ಡ ಹಂತಕ್ಕೆ ಬೆಳೆದಿದ್ದೀರಿ; ಬಹಳ ಸಂತೋಷ. ಇವತ್ತು ಉಪ ಮುಖ್ಯಮಂತ್ರಿ ಇದ್ದೀರಿ. ಈಗಾಗಲೇ ನಿಮ್ಮ ಪಕ್ಷದಲ್ಲಿ ನೀವು ಮುಖ್ಯಮಂತ್ರಿ ಆಗಬೇಕು ಎಂದು ಮಾತನಾಡುತ್ತಿದ್ದಾರೆ. ಬಹಳ ಸಂತೋಷ. ನಾನು ಆ ಎತ್ತರಕ್ಕೆ ಬೆಳೆದಿಲ್ಲ; ನನ್ನ ಪರಿಸ್ಥಿತಿಯೇ ಬೇರೆ. ನಾನು ಕಾರ್ಟಿಯರ್, ರೋಲೆಕ್ಸ್, ಹೂಬ್ಲೋಟ್ ವಾಚ್ ಕಟ್ಟಿಲ್ಲ; ನನಗಿರೋದು ಒಂದೇ ಟೈಟಾನ್ ಎಂದು ಗಮನಕ್ಕೆ ತಂದರು. ಹೋಗಲಿ ನನಗೆ ಐದಾರು ಇಲ್ಲ. ನನಗಿರೋದು ಒಂದೇ. ಆದರೆ, ಅಫಿಡವಿಟ್‍ನಲ್ಲಿ ತಿಳಿಸಿಲ್ಲ ಎಂದದ್ದು ನನ್ನ ಅಪರಾಧವೇ ಎಂದು ಕೇಳಿದರು.
ಸಿದ್ದರಾಮಯ್ಯನವರಿಗೂ, ಶಿವಕುಮಾರ್ ಅವರಿಗೂ ನೂರು ವಾಚ್ ಕಟ್ಟುವಷ್ಟು ಶಕ್ತಿ ಇದೆ. ಅವರು ಅಫಿಡವಿಟ್‍ನಲ್ಲಿ ತೋರಿಸಿದ್ದೇನೆ ಎಂದಿದ್ದರು. ನಾನು ಅವರದನ್ನು ತೋರಿಸಿಲ್ಲ ಎಂದಿದ್ದೇನೆ ಅಷ್ಟೇ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನೀವು ಕಟ್ಟಿದ್ದನ್ನು ನೋಡಿ ಅಸೂಯೆಪಟ್ಟು ನಾನು ಹೇಳಿಕೆ ಕೊಟ್ಟಿಲ್ಲ ಎಂದು ನುಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತ್ತು ನಾನು ಬಹುಕಾಲದ ಸ್ನೇಹಿತರು. ನಾನು ಅನವಶ್ಯಕವಾದ ಯಾವುದೇ ಆಪಾದನೆ ಮಾಡಿಲ್ಲ; ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ನಾನು ವಾಚನ್ನು ಆಸ್ಟ್ರೇಲಿಯದಲ್ಲಿ 7 ವರ್ಷದ ಹಿಂದೆ ತೆಗೆದುಕೊಂಡಿದ್ದೇನೆ. ಹಣ ಕೊಟ್ಟೇ ತೆಗೆದುಕೊಂಡಿದ್ದೇನೆ ಎಂದಿದ್ದರು ಎಂದು ಗಮನಕ್ಕೆ ತಂದರು.
ಚುನಾವಣಾ ಅಫಿಡವಿಟ್‍ನ 38ನೇ ಪುಟದಲ್ಲಿ ಡಿ.ಕೆ.ಶಿವಕುಮಾರ್ ಅವರು ರೋಲೆಕ್ಸ್ ವಾಚ್, ಹೂಬ್ಲೋಟ್ ವಾಚ್ ಇರುವುದಾಗಿ ತಿಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಒಂದಲ್ಲ; ನೂರು ವಾಚ್ ಕಟ್ಟುವ ಶಕ್ತಿ ಇದೆ ಎಂಬುದು ನನಗೂ ಗೊತ್ತಿದೆ. ನೀವು ನೂರು ವಾಚ್ ಕಟ್ಟಿದರೂ ನಾನು ನಿಮ್ಮ ಸ್ನೇಹಿತನಾಗಿ ಸಂತೋಷ ಪಡುತ್ತೇನೆ ಎಂದು ತಿಳಿಸಿದರು.
2018, 2023ರ ಚುನಾವಣಾ ಅಫಿಡವಿಟ್‍ನಲ್ಲಿ ಕಾರ್ಟಿಯರ್ ವಾಚ್ ಬಗ್ಗೆ ತಿಳಿಸಿಲ್ಲ; 7 ವರ್ಷದ ಹಿಂದಿನಿಂದ ಇರುವ ಕೈಯಲ್ಲಿ ಕಟ್ಟಿದ್ದ ಕಾರ್ಟಿಯರ್ ವಾಚನ್ನು ಯಾಕೆ ಅಫಿಡವಿಟ್‍ನಲ್ಲಿ ತಿಳಿಸಿಲ್ಲವೇಕೆ ಎಂದು ಮತ್ತೆ ಪ್ರಶ್ನೆ ಮಾಡಿದರು.
ನೀವು ಕದ್ದು ಕಟ್ಟಿದ್ದೆಂದು ಹೇಳಿಲ್ಲ; ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ಕೊಟ್ಟ ಹೂಬ್ಲೋಟ್ ವಾಚ್ ಹಿಂದೆ ವಿವಾದಕ್ಕೆ ಗುರಿಯಾಗಿತ್ತು. ಕೊನೆಯಲ್ಲಿ ಅದನ್ನು ಸರಕಾರದ ವಶಕ್ಕೆ ಒಪ್ಪಿಸಿ ವಿಧಾನಸೌಧದ ವಸ್ತು ಸಂಗ್ರಹಾಲಯದಲ್ಲಿ ಈಗ ಇಡಲಾಗಿದೆ ಎಂದು ತಿಳಿಸಿದರು. ಈಗ ಲೋಕಾಯುಕ್ತಕ್ಕೆ ಕೊಟ್ಟ ಮಾಹಿತಿಯಡಿ ರೋಲೆಕ್ಸ್ ವಾಚ್- 9 ಲಕ್ಷ, ಕಾರ್ಟಿಯರ್ ವಾಚ್- 23.90 ಲಕ್ಷ, ಇನ್ನೊಂದು ಕಾರ್ಟಿಯರ್ ವಾಚ್- 12.06 ಲಕ್ಷ ಎಂದಿದ್ದಾರೆ. ಹಾಗಿದ್ದರೆ ಹೂಬ್ಲೋಟ್ ವಾಚ್ ಎಲ್ಲಿ ಹೋಗಿದೆ ಎಂದು ಮತ್ತೆ ಪ್ರಶ್ನಿಸಿದರು.








