ಕೊಪ್ಪಳ: ಜಿಲ್ಲೆಯ ಗಂಗಾವತಿ ಕ್ಷೇತ್ರದ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜನಾರ್ಧನ ರೆಡ್ಡಿ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗಂಗಾವತಿ ರಾಜಕೀಯ ಚಾಣಕ್ಯ ಹಾಗೂ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಮೌನ ಮುರಿದ್ದಾರೆ. ಅವರು ಏನು ಹೇಳಿದರು ಅಂತ ಮುಂದೆ ಓದಿ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ಪ್ರಸ್ತುತ ಗಂಗಾವತಿ ರಾಜಕಾರಣದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮಿನಿಸುತ್ತಿದ್ದೇನೆ. ರಾಜಕಾರಣದ ಲೆಕ್ಕಾಚಾರ ಹೇಗೆಲ್ಲಾ ನಡೆಯುತ್ತಿದೆ. ಯಾರೆಲ್ಲಾ ಏನೆಲ್ಲಾ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡುತ್ತಿರುವೆ ಎಂದಿದ್ದಾರೆ.
ಇನ್ನೂ ಬಿಜೆಪಿಯ ಕಾರ್ಯಕರ್ತರು ಹಾಗು ನನ್ನ ಸ್ನೇಹಿತರು ಹಿತೈಷಿಗಳು ಕೂಡ ನನ್ನನ್ನು ಸಂಪರ್ಕಮಾಡಿ ಗಂಗಾವತಿಗೆ ಬರುವಂತೆ ಮನವಿ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷ ನಿರ್ದೇಶನ ನೀಡಿದ್ದೇ ಆದರೆ ಪಕ್ಷದ ತಿರ್ಮಾನಕ್ಕೆ ಬದ್ಧನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ರಾಜಕೀಯ ನೀತಿ ರೂಪಿಸಿ ಗಂಗಾವತಿಯಲ್ಲಿ ಬಿಜೆಪಿ ಪಕ್ಷ ಸಂಘಟನೆಯ ನೇತ್ರತ್ವವನ್ನು ತೆಗೆದುಕೊಂಡು, ಪಕ್ಷದ ಎಲ್ಲಾ ನಾಯಕರ ಹಾಗೂ ನಿಷ್ಠಾವಂತ ಕಾರ್ಯಕರ್ತರ ಜೊತೆಗೂಡಿಸಲಾಗುತ್ತದೆ. ಮುಂಬರುವಂತ ಚುನಾವಣೆಗೆ ಸವಾಲುಗಳನ್ನು ಮೆಟ್ಟಿ, ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಈಗಾಗಲೇ ಗಂಗಾವತಿ ಬಿಜೆಪಿ ಪಕ್ಷದ ಮುಖಂಡರ ಜೊತೆ ಸಂಪರ್ಕದಲ್ಲಿ ಇದ್ದು, ರಾಜಕಾರಣದ ಸೂಕ್ಷ್ಮ ನಡೆಗಳನ್ನು ಗಮನಿಸುವುದರ ಜೊತೆ ಜೊತೆಗೆ ಪಕ್ಷದ ಉನ್ನತ ಮಟ್ಟದ ಆದೇಶವನ್ನು ಸವಾಲಾಗಿ ಸ್ವೀಕರಿಸಲು ಸಿದ್ದನಿದ್ದೇನೆ ಎಂಬುದಾಗಿ ಹೇಳಿದ್ದಾರೆ.