ಬೆಂಗಳೂರು: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲು ಪ್ರವಾಸಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ಇಂದು ಎರಡನೇ ಟ್ರಿಪ್ನ ಯಾತ್ರಾರ್ಥಿಗಳಿಗೆ ಆತ್ಮೀಯವಾಗಿ ಬಿಳ್ಕೊಡುಗೆ ನೀಡಲಾಗಿದೆ. ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಡಿಸೆಂಬರ್ ತಿಂಗಳ ಬದಲಾಗಿ ಜನವರಿ ತಿಂಗಳಿನಲ್ಲಿ ಮುಂದಿನ ಟ್ರಿಪ್ಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಅ ಜೊಲ್ಲೆ ಹೇಳಿದರು.
ಇಂದು ಬೆಂಗಳೂರಿನಲ್ಲಿ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ರೈಲು ಯಾತ್ರೆಯ ಪ್ರಥಮ ಟ್ರಿಪ್ನ ಪರಿಶೀಲನೆ ಸಭೆ ನಡೆಸಿ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಎರಡನೇ ಟ್ರಿಪ್ನ ಯಾತ್ರಾರ್ಥಿಗಳಿಗೆ ಆತ್ಮೀಯವಾಗಿ ಬಿಳ್ಕೊಡುಗೆ ನೀಡಿ ಮಾತನಾಡಿದರು.
ಜನವರಿ ತಿಂಗಳಲ್ಲಿ ಮೂರನೇ ಟ್ರಿಪ್
ಉತ್ತರ ಭಾರತದಲ್ಲಿ ಡಿಸೆಂಬರ್ ಮತ್ತು ಜನವರಿ ತಿಂಗಳ ಆರಂಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುತ್ತದೆ. ಡಿಸೆಂಬರ್ 5 ರ ನಂತರ ಉಷ್ಣಾಂಶವು ರಾತ್ರಿಯ ಹೊತ್ತು 5 ಡಿಗ್ರಿ ಸೆಲ್ಸಿಯಸ್ ಗೆ ತಲುಪುತ್ತದೆ. ಇಷ್ಟು ತೀವ್ರ ಚಳಿಯನ್ನು ದಕ್ಷಿಣ ಭಾರತದ ಜನರು ತಡೆದುಕೊಳ್ಳುವುದು ಬಹಳ ಕಷ್ಟ. ಹಾಗೂ ಐಆರ್ಸಿಟಿಸಿ ಉತ್ತರ ಭಾರತದ ಕಡೆಯ ತನ್ನ ಎಲ್ಲಾ ಪ್ರವಾಸಿ ರೈಲುಗಳನ್ನ ದಕ್ಷಿಣ ಮತ್ತು ಪಶ್ಚಿಮ ಭಾರತದ ಕಡೆಗೆ ಮಾರ್ಪಾಡು ಮಾಡುತ್ತದೆ. ಈ ಹಿನ್ನಲೆಯಲ್ಲಿ ಕಾಶಿ ದರ್ಶನ ರೈಲನ್ನ ಡಿಸೆಂಬರ್ ಬದಲಾಗಿ ಜನವರಿ ತಿಂಗಳಲ್ಲಿ ಯೋಜಿಸುವಂತೆ ಐಆರ್ಸಿಟಿಸಿ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ. ನಮ್ಮ ಯಾತ್ರಾರ್ಥಿಗಳಲ್ಲಿ ಹೆಚ್ಚಿನ ಜನರು ಹಿರಿಯ ನಾಗರೀಕರಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಜನವರಿ ತಿಂಗಳ 20 ರ ನಂತರ 3 ನೇ ಟ್ರಿಪ್ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಸಚಿವರು ತಿಳಿಸಿದರು.
ಶೇಕಡಾ 90 ರಷ್ಟು ಹಿರಿಯ ನಾಗರೀಕರು
ಕಾಶಿ ದರ್ಶನ ರೈಲು ಯಾತ್ರೆಯ ಎರಡೂ ಟ್ರಿಪ್ಗಳಲ್ಲಿ ಶೇಕಡಾ 90 ರಷ್ಟು ಹಿರಿಯ ನಾಗರೀಕರು ಪಾಲ್ಗೊಂಡಿದ್ದಾರೆ. ಹಲವಾರು ಕುಟುಂಬಗಳು ತಮ್ಮ ಪೋಷಕರನ್ನ ಈ ಕಾಶಿಯಾತ್ರೆಗೆ ಕಳುಹಿಸುತ್ತಿದ್ದಾರೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಯಾತ್ರೆಯ ಅನುಕೂಲವನ್ನು ಹಿರಿಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike
ಕಾಶಿ ಯಾತ್ರೆಗೆ ಪ್ರತ್ಯೇಕ ಅನುದಾನ
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ಸಹಾಯಧನ ಹಾಗೂ ರೈಲು ಯಾತ್ರೆಗೆ ಪ್ರತ್ಯೇಕ ಅನುದಾನವಿದೆ. ಯಾವುದೇ ಇನ್ನಿತರ ಯೋಜನೆಗಳ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿಲ್ಲ. ಕಾಶಿ ಯಾತ್ರೆಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ರೈಲು ಯಾತ್ರೆ ಯಾವುದೇ ತೊಂದರೆ ಇಲ್ಲದೆ ಮುಂದುವರೆಯಲಿದೆ ಎಂದರು.
ಚಾರ್ಧಾಮ್ ಮತ್ತು ಮಾನಸ ಸರೋವರ ಯಾತ್ರಾರ್ಥಿಗಳ ಸಹಾಯಧನಕ್ಕೆ ಅರ್ಜಿ
ಚಾರ್ಧಾಮ್ ಯಾತ್ರೆ ಇತ್ತೀಚಿಗೆ ಮುಗಿದಿದ್ದು, ನಮ್ಮ ಇಲಾಖೆಯ ಕಾಲಾವಧಿಯಂತೆಯೇ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಯಾವಾಗಲೂ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗಿ, ಏಪ್ರಿಲ್ ತಿಂಗಳವರೆಗೆ ನಡೆಯುತ್ತದೆ. ಈ ಯೋಜನೆಗೂ ಸರಕಾರದ ಸಹಾಯಧನವಿದ್ದು ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಚಾರ್ಧಾಮ್ ಯಾತ್ರೆ ಇತ್ತೀಚಿಗೆ ಮುಗಿದಿರುವ ಹಿನ್ನಲೆಯಲ್ಲಿ ಅರ್ಜಿಗಳನ್ನು ಅಹ್ವಾನಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕೃಷಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕುಗಳಿಂದ ಉತ್ತಮ ಸಾಧನೆ – ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘನೆ
ಎರಡನೇ ಟ್ರಿಪ್ನ ಯಾತ್ರಾರ್ಥಿಗಳಿಗೆ ಸಚಿವರಿಂದ ಆತ್ಮೀಯ ಬಿಳ್ಕೊಡುಗೆ
ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯ ಎರಡನೇ ಟ್ರಿಪ್ ಇಂದಿನಿಂದ ಪ್ರಾರಂಭವಾಯಿತು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಟ ಯಾತ್ರಾರ್ಥಿಗಳಿಗೆ ಸಚಿವರ ನೇತೃತ್ವದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧ ಶುಭ ಹಾರೈಸಿ ಬಿಳ್ಕೊಡುಗೆ ನೀಡಿದರು. ಇಂತಹ ಕಾರ್ಯಕ್ರಮದ ಮೂಲಕ ರಾಜ್ಯ ಸರಕಾರ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಅತಿಥಿಗಳು ಹರ್ಷವ್ಯಕ್ತಪಡಿಸಿದರು.