ಬೆಂಗಳೂರು: ಕನ್ನಡಿಗರ ಪಾಲಿನ ಪುಣ್ಯದಿಂದ ಕರ್ನಾಟಕ ರಾಜ್ಯೋತ್ಸವದ ( Karnataka Rajyotsava ) ನವೆಂಬರ್ 1 ರಂದು ಜೆಡಿಎಸ್ ಮಹತ್ವಾಕಾಂಕ್ಷಿ ಕಾರ್ಯಕ್ರಮ ಪಂಚರತ್ನ ಯಾತ್ರೆಗೆ ( Pancharathna Yatra ) ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಪದಾಧಿಕಾರಿಗಳ ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಪಂಚರತ್ನ ಯಾತ್ರೆ ನವೆಂಬರ್ 1 ರಂದು ನಡೆಯಬಹುದು ಎಂದು ನಿರ್ಧಾರ ಮಾಡಲಾಗಿದೆ. ನಾವು ನಮ್ಮ ಕಾರ್ಯಕ್ರಮ ಜನತೆಗೆ ತಲುಪಬೇಕಾಗಿದೆ. ಇದೇ ವೇಳೆ ರಾಷ್ಟ್ರೀಯ ಪಕ್ಷಗಳು ಅಬ್ಬರ ಮಾಡುತ್ತೇವೆ. ಹೀಗಾಗಿ ನಾವು ಅತುರವಿಲ್ಲದೆ ಯಾತ್ರೆ ಮಾಡುತ್ತೇವೆ. ಆ ಪಕ್ಷಗಳ ಕಾರ್ಯಕ್ರಮ ಮುಗಿಯಲಿ. ಈ ವಿಷಯವನ್ನು ಪದಾಧಿಕಾರಿಗಳಿಗೆ ಕಠಿಣವಾಗಿಯೇ ಹೇಳಿದ್ದೇನೆ.
20% ಕಮೀಷನ್ ಬಗ್ಗೆ ಮೊದಲು ಹೇಳಿದವರೇ ಮೋದಿ: ಶೀಘ್ರವೇ BMS ಟ್ರಸ್ಟ್ ಅಕ್ರಮದ ಬಗ್ಗೆ ಪ್ರಧಾನಿಗೆ ಪತ್ರ – HDK
ಪಂಚರತ್ನ ರಥಯಾತ್ರೆ ಕಳೆದ ತಿಂಗಳು ಪ್ರಾರಂಭ ಆಗಬೇಕಿತ್ತು.ಆದರೆ ಮಳೆಯಿಂದ ಮುಂದೂಡಿಕೆ ಮಾಡಲಾಗಿತ್ತು. ಇನ್ನು ಬಿಜೆಪಿ ನಾಯಕರು ಧಮ್ ತಾಕತ್ ಬಗ್ಗೆ ಮಾಡುತ್ತಿದ್ದಾರೆ. ನಾವು ಪಂಚರತ್ನ ಯಾತ್ರೆ ಮಾಡುತ್ತಿದ್ದೇವೆ. ಸ್ವತಂತ್ರ ಸರ್ಕಾರ ಬಂದರೆ ಏನು ಮಾಡುತ್ತೇವೆ ಎನ್ನುವುದನ್ನು ಜನರಿಗೆ ಹೇಳುತ್ತೇವೆ. ಕೆಲ ತಿಂಗಳ ಹಿಂದೆ ಯಶಸ್ವಿಯಾಗಿ ಜನತಾ ಜಲಧಾರೆ ಸಮಾವೇಶ ಮಾಡಿದ್ದೆವು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ನೀರಾವರಿ ಯೋಜನೆಗಳ ಜಾರಿಗೆ ಕೊನೆಪಕ್ಷ ಮೂರರಿಂದ ನಾಲ್ಕು ಲಕ್ಷ ಕೋಟಿ ಬೇಕಾಗಿದೆ. ಅದಕ್ಕೆ ಯಾವ ರೀತಿಯ ದೂರದೃಷ್ಟಿ ಎನ್ನುವುದನ್ನು ಜನತೆಗೆ ತಿಳಿಸುತ್ತೇವೆ ಎಂದರು ಅವರು.
ಅಕ್ಟೋಬರ್ 8 ರಂದು ಜನತಾ ಮಿತ್ರ ಸಮಾರೋಪ
ಮುಂದಿನ ತಿಂಗಳು ಅಕ್ಟೋಬರ್ 8ರಂದು ಜನತಾ ಮಿತ್ರ ಸಮಾರೋಪ ಸಮಾರಂಭವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರಿನ ಉದ್ದಗಲಕ್ಕೂ ಜನತಾ ಮಿತ್ರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈಗ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಜನತೆಗೆ ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ತಿಳಿಸುತ್ತೇವೆ ಎಂದರು ಮಾಜಿ ಮುಖ್ಯಮಂತ್ರಿಗಳು.
ಇತ್ತೀಚೆಗೆ ಸಿಎಂ ಇಬ್ರಾಹಿಂ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ರಾಜ್ಯ ಕಾರ್ಯಕಾರಣಿಗೆ ಹೊಸ ಸದಸ್ಯರನ್ನು ನೇಮಕ ಮಾಡಲಾಗಿತ್ತು. 27 ಪದಾಧಿಕಾರಿ ಹಾಗೂ 40 ಹೆಚ್ಚುವರಿ ಪದಾಧಿಕಾರಿಗಳ ನೇಮಕ ಆಗಿತ್ತು. ಇಂದು ಅವರೆಲ್ಲರ ಜತೆ ಚರ್ಚೆ ನಡೆಸಲಾಗಿದೆ. ಅವರೆಲ್ಲರಿಗೂ ಮುಂದಿನ ಆರು ತಿಂಗಳ ಕಾಲ ಹೇಗೆ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದ್ದೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ರಾಜ್ಯ ಕಾರ್ಯಕಾರಣಿ ಸಮಿತಿಗೆ ಆಯ್ಕೆ ಆದ ಮೇಲೆ ಕೇಲವರಿಗೆ ಜಿಲ್ಲಾ ಉಸ್ತುವಾರಿ ಕೊಡುವ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಅಧ್ಯಕ್ಷರಿಗೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನವರಾತ್ರಿ ಶುಭಾಶಯ ಕೋರಿದ ಮಾಜಿ ಸಿಎಂ
ನಾಡಿನ ಎಲ್ಲರಿಗೂ ನಾಡಹಬ್ಬ ದಸರಾ ಮತ್ತು ನವರಾತ್ರಿ ಶುಭಾಶಯ ಕೋರಿದ ಮಾಜಿ ಮುಖ್ಯಮಂತ್ರಿಗಳು, ದುರಿತ ಕಾಲದಲ್ಲಿ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲೆಂದು ಪ್ರಾರ್ಥಿಸುವುದಾಗಿ ಹೇಳಿದರು.