ಬೈರೂತ್ :ದಕ್ಷಿಣ ಲೆಬನಾನ್‌ನ ಹಳ್ಳಿಗಳ ಮೇಲೆ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಓರ್ವ ಮಹಿಳಾ ಪತ್ರಕರ್ತೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಕಳೆದ ವಾರವಷ್ಟೇ ಅಮೆರಿಕದ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ ಘೋಷಿಸಲಾಗಿದ್ದರೂ, ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಮತ್ತೆ ಕಿಡಿ ಹೊತ್ತಿಕೊಂಡಿದೆ.
ಲೆಬನಾನ್‌ನ ‘ಅಲ್-ಅಖ್ಬರ್’ ದಿನಪತ್ರಿಕೆಯ ವರದಿಗಾರ್ತಿ ಅಮಲ್ ಖಲೀಲ್ (43) ಅವರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅಲ್-ತೈರಿ ಗ್ರಾಮದ ಬಳಿ ವರದಿಗಾರಿಕೆ ಮಾಡುತ್ತಿದ್ದಾಗ ಅವರ ವಾಹನದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಅವರ ಜೊತೆಗಿದ್ದ ಛಾಯಾಗ್ರಾಹಕಿ ಝೈನಾಬ್ ಫರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಸ್ರೇಲ್ ನಡೆಸಿದ ಸರಣಿ ದಾಳಿಗಳಲ್ಲಿ ಪತ್ರಕರ್ತೆ ಅಮಲ್ ಮಾತ್ರವಲ್ಲದೆ, ಇಬ್ಬರು ನಾಗರಿಕರು ಹಾಗೂ ಇತರ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇದು ಏಪ್ರಿಲ್ 16 ರಂದು ಕದನ ವಿರಾಮ ಘೋಷಣೆಯಾದ ನಂತರ ನಡೆದ ಅತ್ಯಂತ ಭೀಕರ ಘಟನೆಯಾಗಿದೆ.
ಪತ್ರಕರ್ತರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ದಾಳಿಯನ್ನು ಲೆಬನಾನ್ ಪ್ರಧಾನಿ ನವಾಫ್ ಸಲಾಮ್ ಕಟುವಾಗಿ ಟೀಕಿಸಿದ್ದಾರೆ. “ಮಾಧ್ಯಮದವರ ಮೇಲೆ ದಾಳಿ ಮಾಡುವುದು ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಬರದಂತೆ ತಡೆಯುವುದು ಸ್ಪಷ್ಟವಾದ ಯುದ್ಧಾಪರಾಧ” ಎಂದು ಅವರು ಗುಡುಗಿದ್ದಾರೆ.








