ಯುಎಸ್‌ನಲ್ಲಿ (ಅಮೆರಿಕ) ಗುರುವಾರ ಸಂಜೆ ಸಾವಿರಾರು ಬಳಕೆದಾರರಿಗೆ ಡಿಸ್ನಿ ಪ್ಲಸ್ (Disney Plus) ಸೇವೆ ಸ್ಥಗಿತಗೊಂಡಿದೆ.
ಬಳಕೆದಾರರ ವರದಿಗಳ ಆಧಾರದ ಮೇಲೆ ಇಂತಹ ಸೇವಾ ವ್ಯತ್ಯಯಗಳನ್ನು ಪತ್ತೆಹಚ್ಚುವ ‘ಡೌನ್ ಡಿಟೆಕ್ಟರ್’ (Down Detector) ಪ್ಲಾಟ್‌ಫಾರ್ಮ್ ಪ್ರಕಾರ, ಯುಎಸ್‌ನಲ್ಲಿ 20,000 ಕ್ಕೂ ಹೆಚ್ಚು ಜನರು ಈ ಜನಪ್ರಿಯ ಸ್ಟ್ರೀಮಿಂಗ್ ಸೇವೆಯನ್ನು ಬಳಸುವಾಗ ವಿವಿಧ ಎರರ್ ಕೋಡ್‌ಗಳನ್ನು (Error Codes) ಎದುರಿಸುತ್ತಿದ್ದಾರೆ.
ಹೆಚ್ಚಿನ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ಗೆ ಲಾಗ್-ಇನ್ (Log-in) ಮಾಡಲು ಪ್ರಯತ್ನಿಸುವಾಗ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ಡೌನ್ ಡಿಟೆಕ್ಟರ್‌ನಲ್ಲಿಯೂ ಸಹ, ಶೇಕಡಾ 47 ರಷ್ಟು ಬಳಕೆದಾರರು ಆಪ್‌ಗೆ ಲಾಗ್-ಇನ್ ಮಾಡುವಲ್ಲಿ ತೊಂದರೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಶೇಕಡಾ 36 ರಷ್ಟು ಜನರು ತಮಗೆ ಆಪ್ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದರೆ, ಶೇಕಡಾ 11 ರಷ್ಟು ಜನರು ಸರ್ವರ್ ಸಂಪರ್ಕದ ಸಮಸ್ಯೆಯನ್ನು ವರದಿ ಮಾಡಿದ್ದಾರೆ.
ವಿಶ್ವದಾದ್ಯಂತ ಹಲವು ಬಳಕೆದಾರರು ಆಪ್ ಓಪನ್ ಮಾಡಲು ಮತ್ತು ಲಾಗ್-ಇನ್ ಮಾಡಲು ತೊಂದರೆ ಎದುರಿಸುತ್ತಿರುವುದನ್ನು ಒಪ್ಪಿಕೊಂಡಿರುವ ಡಿಸ್ನಿ ಪ್ಲಸ್, ಈ ಸಮಸ್ಯೆಗೆ ಪ್ರತಿಕ್ರಿಯಿಸಿದೆ. ‘X’ ವೇದಿಕೆಯಲ್ಲಿ ಬಳಕೆದಾರರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಸಂಸ್ಥೆಯ ಅಧಿಕೃತ ಬೆಂಬಲ ಖಾತೆಯಾದ ‘ಡಿಸ್ನಿ ಪ್ಲಸ್ ಹೆಲ್ಪ್’, ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.
”ಈ ಅನುಭವಕ್ಕಾಗಿ ನಾವು ವಿಷಾದಿಸುತ್ತೇವೆ. ನಮ್ಮ ತಂಡವು ಈಗಾಗಲೇ ಉಂಟಾಗಿರುವ ಈ ಅಸ್ಥಿರತೆಯ ಬಗ್ಗೆ ಗಮನಹರಿಸಿದ್ದು, ಆದಷ್ಟು ಬೇಗ ಇದನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ.”
ಡಿಸ್ನಿ ಪ್ಲಸ್ ಆಪ್‌ನಲ್ಲಿ ತಮಗಾದ ತೊಂದರೆಗಳ ಬಗ್ಗೆ ನೂರಾರು ಬೇಸರಗೊಂಡ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡಿದ್ದಾರೆ.
”ಡಿಸ್ನಿ ಪ್ಲಸ್, ಇದೇನಾದರೂ ಜಾಗತಿಕ ಸಮಸ್ಯೆಯೇ? ನನಗೆ ಲಾಗ್-ಇನ್ ಮಾಡಲು ಅಥವಾ ಲಾಗ್-ಇನ್ ಪುಟಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಆಪ್ ನನ್ನ ಇಮೇಲ್ ವಿಳಾಸವನ್ನೇ ಗುರುತಿಸುತ್ತಿಲ್ಲ,” ಎಂದು ಬಳಕೆದಾರರೊಬ್ಬರು ತಮಗಾದ ಸಮಸ್ಯೆಯ ಸ್ಕ್ರೀನ್‌ಶಾಟ್ ಹಂಚಿಕೊಳ್ಳುತ್ತಾ ಬರೆದುಕೊಂಡಿದ್ದಾರೆ.








