ಅಯೋಧ್ಯೆ:ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಭಕ್ತರು ನೀಡಿರುವ ಕೋಟ್ಯಂತರ ರೂಪಾಯಿ ದೇಣಿಗೆ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪದ ತನಿಖೆ ತೀವ್ರಗೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT), ರಾಮಮಂದಿರ ಟ್ರಸ್ಟ್ನ ಪ್ರಮುಖ ಸದಸ್ಯರಾದ ಡಾ. ಅನಿಲ್ ಮಿಶ್ರಾ ಅವರನ್ನು ಸತತವಾಗಿ ವಿಚಾರಣೆಗೆ ಒಳಪಡಿಸಿದೆ.
ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಮೂವರು ಸದಸ್ಯರ ಹಿರಿಯ ಅಧಿಕಾರಿಗಳ ಎಸ್ಐಟಿ ತಂಡವು, ರಾಮಮಂದಿರ ಸಂಕೀರ್ಣದಲ್ಲೇ ಮೊಕ್ಕಾಂ ಹೂಡಿ ಕಳೆದ ನಾಲ್ಕು ದಿನಗಳಿಂದ ತೀವ್ರ ತನಿಖೆ ನಡೆಸುತ್ತಿದೆ.
ಭಕ್ತರು ಕಾಣಿಕೆ ಡಬ್ಬಿಗಳಿಗೆ ಹಾಕುವ ಹಣ ಹಾಗೂ ಚಿನ್ನಾಭರಣಗಳನ್ನು ಸ್ವೀಕರಿಸುವ, ಎಣಿಕೆ ಮಾಡುವ ಮತ್ತು ಬ್ಯಾಂಕ್ಗೆ ಜಮಾ ಮಾಡುವ ಪ್ರಕ್ರಿಯೆಗಳ ಕುರಿತು ಎಸ್ಐಟಿ ಅಧಿಕಾರಿಗಳು ಅನಿಲ್ ಮಿಶ್ರಾ ಅವರಿಂದ ಮಾಹಿತಿ ಪಡೆದಿದ್ದಾರೆ.
ಸಿಬ್ಬಂದಿ ನೇಮಕಾತಿ ಕುರಿತು ಪ್ರಶ್ನೆ: ಕಾಣಿಕೆ ಹಣ ಎಣಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳ ನೇಮಕಾತಿ ಹೇಗೆ ನಡೆಯಿತು ಮತ್ತು ಅದರಲ್ಲಿ ಯಾರಾದರೂ ಟ್ರಸ್ಟ್ ಸದಸ್ಯರ ಆಪ್ತರಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಒಂದು ದಿನ ಮುಂಚಿತವಾಗಿ ಎಸ್ಐಟಿ ತಂಡವು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನೂ ವಿಚಾರಣೆಗೆ ಒಳಪಡಿಸಿ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ರಾಮಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಕೋಟ್ಯಂತರ ರೂಪಾಯಿ ಹಣ ನಾಪತ್ತೆಯಾಗಿದೆ ಮತ್ತು ಹಣ ಎಣಿಕೆ ಮಾಡುವ ಸಿಬ್ಬಂದಿಯೊಬ್ಬರ ಮನೆಯಲ್ಲಿ ಲಕ್ಷಾಂತರ ನಗದು ಪತ್ತೆಯಾಗಿದೆ ಎಂದು ವಿರೋಧ ಪಕ್ಷಗಳು ಹಾಗೂ ಕೆಲವು ಸ್ಥಳೀಯ ನಾಯಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸ್ವತಃ ಟ್ರಸ್ಟ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿತ್ತು. ಅದರಂತೆ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿದೆ.








