ವಾಷಿಂಗ್ಟನ್:ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಇರಾನ್ನ ಕ್ರಾಂತಿಕಾರಿ ಗಾರ್ಡ್ಸ್ (IRGC) ಹಾರ್ಮುಜ್ ಜಲಸಂಧಿಯಲ್ಲಿ ಕನಿಷ್ಠ ಮೂರು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಜಾಗತಿಕ ಇಂಧನ ಪೂರೈಕೆಯ ಮೇಲೆ ಆತಂಕದ ನೆರಳು ಆವರಿಸಿದೆ.
ಬುಧವಾರ ಮುಂಜಾನೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಸರಕು ಸಾಗಣೆ ಹಡಗುಗಳ ಮೇಲೆ ಇರಾನ್ನ ಸೇನಾ ದೋಣಿಗಳು ರೇಡಿಯೋ ಸಂವಹನ ನಡೆಸದೆಯೇ ಏಕಾಏಕಿ ಗುಂಡಿನ ದಾಳಿ ನಡೆಸಿವೆ.
ದಾಳಿಗೊಳಗಾದ ಹಡಗುಗಳಲ್ಲಿ ಎರಡು ಹಡಗುಗಳನ್ನು (ಪನಾಮ ಮತ್ತು ಲೈಬೀರಿಯಾ ಧ್ವಜ ಹೊಂದಿದ್ದ ಹಡಗುಗಳು) ಇರಾನ್ ತನ್ನ ವಶಕ್ಕೆ ಪಡೆದುಕೊಂಡಿದ್ದು, ಅವುಗಳನ್ನು ಇರಾನ್ ಕರಾವಳಿಯತ್ತ ಕೊಂಡೊಯ್ದಿದೆ ಎಂದು ವರದಿಯಾಗಿದೆ.
ಅಮೆರಿಕಾದ ನೌಕಾಪಡೆಯು ಇರಾನ್ನ ಬಂದರುಗಳ ಮೇಲೆ ಹೇರಿರುವ ದಿಗ್ಬಂಧನವನ್ನು ಮುಂದುವರಿಸಿರುವುದೇ ಇರಾನ್ನ ಈ ಪ್ರಚೋದನಾತ್ಮಕ ಕ್ರಮಕ್ಕೆ ಕಾರಣ ಎನ್ನಲಾಗುತ್ತಿದೆ. “ನಮ್ಮ ಬಂದರುಗಳ ಮೇಲಿನ ದಿಗ್ಬಂಧನವು ಯುದ್ಧಕ್ಕೆ ಸಮಾನ” ಎಂದು ಇರಾನ್ ಕಿಡಿಕಾರಿದೆ.
ಕೇವಲ ಒಂದು ದಿನದ ಹಿಂದೆಯಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಸಂಧಾನದ ಮೇರೆಗೆ ಕದನ ವಿರಾಮವನ್ನು ವಿಸ್ತರಿಸುವುದಾಗಿ ತಿಳಿಸಿದ್ದರು. ಆದರೆ, ಇರಾನ್ನ ಈ ಇತ್ತೀಚಿನ ದಾಳಿಯು ಟ್ರಂಪ್ ಅವರ ಶಾಂತಿ ಪ್ರಯತ್ನಗಳಿಗೆ ನೇರ ಸವಾಲು ಹಾಕಿದಂತಿದೆ.
”ಇರಾನ್ ತನ್ನ ಪ್ರಸ್ತಾವನೆಯನ್ನು ಸಲ್ಲಿಸುವವರೆಗೆ ಕದನ ವಿರಾಮ ಇರುತ್ತದೆ, ಆದರೆ ನಮ್ಮ ದಿಗ್ಬಂಧನ ಮುಂದುವರಿಯುತ್ತದೆ,” ಎಂದು ಟ್ರಂಪ್ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಜಲಸಂಧಿಯಲ್ಲಿ ತನ್ನ ಬಲ ಪ್ರದರ್ಶನ ಮಾಡಿದೆ.








