ಬೆಂಗಳೂರು: ನಗರದ ಎನ್ ಜಿಇಎಫ್ ಕಾರ್ಖಾನೆ ಜಾಗದಲ್ಲಿ ತಲೆ ಎತ್ತುತ್ತಿರುವ ವೃಕ್ಷೋದ್ಯಾನದ ಆವರಣದಲ್ಲಿ ‘ಇನ್ನೋವೇಶನ್ ಎಕ್ಸ್ಪೀರಿಯನ್ಸ್ ಸೆಂಟರ್’ ಕೂಡ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.
ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ ಇಂಟರ್ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ ಸೇರಿದಂತೆ ಇತರ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿರುವ ಮೂರು ದಿನಗಳ ‘ಫ್ಯೂಚರ್ ಡಿಸೈನ್ ಫೆಸ್ಟಿವಲ್’ಗೆ ಚಾಲನೆ ನೀಡಿ ಅವರು ಮಾತನಾಡಿ, ಜಗತ್ತಿನ ಎಲ್ಲ ಪ್ರಮುಖ ನಗರಗಳಲ್ಲಿ ಅಲ್ಲಿನ ಬೆಳವಣಿಗೆಗೆ ದಿಕ್ಕುದೆಸೆ ತೋರುವ ಸಿಟಿ ಸೆಂಟರ್ ಇರುತ್ತದೆ. ಬೆಂಗಳೂರಿನ ವಿಸ್ತಾರವನ್ನು ಪರಿಗಣಿಸಿ ಎಂಟು ದಿಕ್ಕುಗಳಲ್ಲೂ ಸಿಟಿ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಕೇಂದ್ರಗಳನ್ನು ಸಮಕಾಲೀನ ಜಗತ್ತಿನ ಮಾನದಂಡಗಳಿಗೆ ತಕ್ಕಂತೆ ಸುಸ್ಥಿರತೆ ಮತ್ತು ಪರಿಸರಸ್ನೇಹಿಯಾಗಿ ಪ್ರಕೃತಿಯ ಹಸಿರು ಸಂಪತ್ತಿನೊಂದಿಗೆ ಬೆಸೆಯಲಾಗುವುದು. ಇಂತಹ ಮಾದರಿ ಬೇರೆಡೆ ಎಲ್ಲೂ ಇಲ್ಲ ಎಂದು ಅವರು ವಿವರಿಸಿದರು.
ಬೆಳಗಾವಿ ಗಡಿ ವಿವಾದ : ಕರ್ನಾಟಕದಲ್ಲೂ ‘ಸಂಪೂರ್ಣ ಬಂದೋಬಸ್ತ್’ ಎಂದ ಸಿಎಂ ಬೊಮ್ಮಾಯಿ
ಜಗತ್ತಿನ ದೊಡ್ಡ ದೊಡ್ಡ ನಗರಗಳಲ್ಲಿ ಅಲ್ಲಿನ ಬೆಳವಣಿಗೆಗೆ ಪೂರಕವಾಗಿ ಸಿಟಿ ಸೆಂಟರ್ಸ್ ಇವೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರಿನಲ್ಲಿ ಇಂತಹ ಕೇಂದ್ರಗಳು ಇಲ್ಲದೆ ಇರುವುದು ಕೊರತೆಯಾಗಿದೆ. ರಸ್ತೆ, ಕೆರೆಕಟ್ಟೆಗಳು ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಪರಿಗಣಿಸಿ ನಮ್ಮ ವಿನ್ಯಾಸಗಳು ಇರಬೇಕು ಎಂದು ಅವರು ಸಲಹೆ ನೀಡಿದರು.
ಪಠ್ಯದಲ್ಲಿ ಡಿಸೈನ್ ಸೇರ್ಪಡೆಗೆ ಚಿಂತನೆ
ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ಸುಸ್ಥಿರ ಅಭಿವೃದ್ಧಿಯ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಡಿಸೈನ್ ಕಲಿಕೆಯನ್ನು ಎನ್ಇಪಿ ಪಠ್ಯಕ್ರಮದ ಭಾಗವಾಗಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದರು.
ಬೆಂಗಳೂರು ನಗರವು ಅತ್ಯಾಧುನಿಕ ತಂತ್ರಜ್ಞಾನಗಳ ಬೆಳವಣಿಗೆಗೆ ಪ್ರಶಸ್ತ ನಗರವಾಗಿದ್ದು, ಇಲ್ಲಿನ ಕಾರ್ಯ ಪರಿಸರವು ಅದ್ಭುತವಾಗಿದೆ. ಐಟಿ-ಬಿಟಿ ಗಳಂತೆಯೇ ರಾಜ್ಯವು ಮುಂಬರುವ ದಿನಗಳಲ್ಲಿ ಡಿಸೈನ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಐಚ್ಛಿಕ ವಿಷಯಗಳ ಆಯ್ಕೆಗೆ ಮುಕ್ತ ಅವಕಾಶ ಇದೆ. ಹೀಗಾಗಿ, ಡಿಸೈನ್ ಅಧ್ಯಯನವನ್ನು ಒಂದು ವಿಷಯವಾಗಿ ಸೇರ್ಪಡೆ ಮಾಡುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿಹಿತವಾಗಿದೆ ಎನ್ನುವುದು ಸರಕಾರದ ಚಿಂತನೆಯಾಗಿದೆ ಎಂದು ಅವರು ವಿವರಿಸಿದರು.
ಡಿಸೈನ್ ಉದ್ಯಮವು ಬೆಂಗಳೂರು ನಗರದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಬೇರೂರಬೇಕು. ಸರಕಾರವು ಇದಕ್ಕೆ ಎಲ್ಲಾ ನೆರವನ್ನೂ ನೀಡಲಿದೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಮಿತಿಯ ಮುಖ್ಯಸ್ಥ ಟಾಮ್ ಜೋಸೆಫ್, ಗೀತಾ ನಾಯರ್ ಮುಂತಾದವರು ಉಪಸ್ಥಿತರಿದ್ದರು.