ನವದೆಹಲಿ: ದಶಕಗಳ ಕಾಲದ ತನ್ನ ಶಾಂತಿಪ್ರಿಯ (Pacifist) ಧೋರಣೆಯನ್ನು ಬದಿಗಿಟ್ಟು, ಮಾರಕ ಆಯುಧಗಳ ರಫ್ತಿಗೆ ಅನುಮತಿ ನೀಡುವ ಜಪಾನ್ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಭಾರತವು ಮುಕ್ತಕಂಠದಿಂದ ಸ್ವಾಗತಿಸಿದೆ. ಈ ಕ್ರಮವು ಉಭಯ ದೇಶಗಳ ನಡುವಿನ ‘ಕಾರ್ಯತಂತ್ರದ ಪಾಲುದಾರಿಕೆ’ಯನ್ನು (Strategic Partnership) ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಭಾರತ ಬಣ್ಣಿಸಿದೆ.
ಎರಡನೇ ಮಹಾಯುದ್ಧದ ನಂತರ ಜಪಾನ್ ಯಾವುದೇ ಮಾರಕ ಆಯುಧಗಳನ್ನು ರಫ್ತು ಮಾಡುತ್ತಿರಲಿಲ್ಲ. ಆದರೆ, ಈಗ ಪ್ರಧಾನಿ ಸನೇ ತಕೈಚಿ ನೇತೃತ್ವದ ಸರ್ಕಾರವು ಈ ನಿರ್ಬಂಧವನ್ನು ಸಡಿಲಿಸಿದ್ದು, ಯುದ್ಧನೌಕೆಗಳು, ಕ್ಷಿಪಣಿಗಳು ಮತ್ತು ಫೈಟರ್ ಜೆಟ್ಗಳನ್ನು ಮಿತ್ರ ರಾಷ್ಟ್ರಗಳಿಗೆ ರಫ್ತು ಮಾಡಲು ಹಸಿರು ನಿಶಾನೆ ನೀಡಿದೆ.
ಜಪಾನ್ನ ಈ ಹೊಸ ನೀತಿಯಿಂದಾಗಿ ಭಾರತಕ್ಕೆ ಸುಧಾರಿತ ಜಪಾನಿ ರಕ್ಷಣಾ ತಂತ್ರಜ್ಞಾನಗಳು ಲಭ್ಯವಾಗಲಿವೆ. ವಿಶೇಷವಾಗಿ ‘ಮೊಗಾಮಿ’ ಕ್ಲಾಸ್ ಸ್ಟೆಲ್ತ್ ಫ್ರಿಗೇಟ್ ಯುದ್ಧನೌಕೆಗಳ ಜಂಟಿ ಉತ್ಪಾದನೆಗೆ ಜಪಾನ್ ಈಗಾಗಲೇ ಭಾರತಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಜಪಾನ್ನ ರಕ್ಷಣಾ ತಂತ್ರಜ್ಞಾನ ಮತ್ತು ಭಾರತದ ಉತ್ಪಾದನಾ ಸಾಮರ್ಥ್ಯ ಒಂದಾದಲ್ಲಿ, ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ಭಾರತದಲ್ಲೇ ತಯಾರಿಸಲು ಸಾಧ್ಯವಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.








