ಬೆಂಗಳೂರು: ತನ್ನ ಬ್ಯಾಂಕಿಂಗ್ ಸೇವೆಗಳನ್ನು ಮತ್ತಷ್ಟು ಆಧುನೀಕರಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್ (India Post) ತನ್ನ ಉಳಿತಾಯ ಖಾತೆದಾರರಿಗೆ ಪರ್ಸನಲೈಸ್ಡ್ ಚೆಕ್ ಬುಕ್ (Personalized Check Book – PCB) ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಕ್ರಮದೊಂದಿಗೆ ಅಂಚೆ ಇಲಾಖೆಯ ಗ್ರಾಹಕರು ಇನ್ಮುಂದೆ ವಾಣಿಜ್ಯ ಬ್ಯಾಂಕುಗಳ ಮಾದರಿಯಲ್ಲೇ ತಮ್ಮ ಹೆಸರು ಮತ್ತು ಖಾತೆ ವಿವರಗಳು ಮುದ್ರಿತವಾಗಿರುವ ಚೆಕ್ ಬುಕ್ಗಳನ್ನು ಪಡೆಯಬಹುದಾಗಿದೆ.
ಈ ಹಿಂದೆ ಅಂಚೆ ಕಚೇರಿ ನೀಡುತ್ತಿದ್ದ ಚೆಕ್ ಬುಕ್ಗಳಲ್ಲಿ ಗ್ರಾಹಕರ ಹೆಸರು ಇರುತ್ತಿರಲಿಲ್ಲ. ಹೊಸ ವ್ಯವಸ್ಥೆಯಲ್ಲಿ ಗ್ರಾಹಕರ ಹೆಸರು ಮತ್ತು ಖಾತೆ ಮಾಹಿತಿ ಮೊದಲೇ ಮುದ್ರಿತವಾಗಿರುತ್ತದೆ.ಪರ್ಸನಲೈಸ್ಡ್ ಚೆಕ್ ಬುಕ್ಗಳ ಬಳಕೆಯಿಂದ ವಹಿವಾಟುಗಳು ಹೆಚ್ಚು ಸುರಕ್ಷಿತವಾಗಿರಲಿವೆ.ಈ ಚೆಕ್ ಬುಕ್ಗಳನ್ನು ಗ್ರಾಹಕರ ನೋಂದಾಯಿತ ವಿಳಾಸಕ್ಕೆ ಅಂಚೆ ಮೂಲಕ ಉಚಿತವಾಗಿ ತಲುಪಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಮೊಬೈಲ್ ಲಿಂಕ್: ಖಾತೆದಾರರ ಮೊಬೈಲ್ ಸಂಖ್ಯೆಯು ಪ್ರಾಥಮಿಕ CIF ಸಂಖ್ಯೆಯೊಂದಿಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
ಕನಿಷ್ಠ ಬ್ಯಾಲೆನ್ಸ್: ಖಾತೆಯಲ್ಲಿ ಕನಿಷ್ಠ ರೂ. 500 ಇರಬೇಕು.
ಶುಲ್ಕ: ಪ್ರತಿ ಚೆಕ್ ವಿತರಣಾ ಶುಲ್ಕ ರೂ. 20 ಮತ್ತು ಅನ್ವಯವಾಗುವ GST ಪಾವತಿಸಲು ಖಾತೆಯಲ್ಲಿ ಸಮರ್ಪಕ ಹಣವಿರಬೇಕು.
ಸಕ್ರಿಯ ಖಾತೆ: ಖಾತೆಯು ಚಾಲ್ತಿಯಲ್ಲಿರಬೇಕು (ನಿಷ್ಕ್ರಿಯ ಅಥವಾ ಸ್ಥಗಿತಗೊಂಡ ಖಾತೆಗಳಿಗೆ ಈ ಸೌಲಭ್ಯ ಇರುವುದಿಲ್ಲ).
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಸ್ತುತ ಗ್ರಾಹಕರು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕವೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಗಮನಿಸಿ: ಚೆಕ್ ಬುಕ್ಗಳು ಅಂಚೆ ಇಲಾಖೆಯ ದಾಖಲೆಗಳಲ್ಲಿರುವ ವಿಳಾಸಕ್ಕೆ ರವಾನೆಯಾಗುವುದರಿಂದ, ಗ್ರಾಹಕರು ತಮ್ಮ ವಿಳಾಸ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಒಂದು ವೇಳೆ ಗ್ರಾಹಕರಿಗೆ ವೈಯಕ್ತಿಕಗೊಳಿಸಿದ ಚೆಕ್ ಬುಕ್ ಬೇಡವೆಂದಾದಲ್ಲಿ, ಅವರು ಅಂಚೆ ಕಚೇರಿ ಕೌಂಟರ್ಗಳಲ್ಲಿ ಸಿಗುವ ಸಾಮಾನ್ಯ ‘ಇನ್ಸ್ಟಂಟ್ ಚೆಕ್ ಬುಕ್’ ಸೌಲಭ್ಯವನ್ನೇ ಮುಂದುವರಿಸಬಹುದಾಗಿದೆ. ಈ ಹೊಸ ಬದಲಾವಣೆಯು ಅಂಚೆ ಕಚೇರಿ ಉಳಿತಾಯ ಖಾತೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.








