ರಾಂಚಿ: ವೈವಾಹಿಕ ಜೀವನದಲ್ಲಿ ದಂಪತಿಗಳ ನಡುವೆ ಉಂಟಾಗುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಹೊಂದಾಣಿಕೆಯ ಕೊರತೆ ಅಥವಾ ಸಾಮಾನ್ಯ ಮನಸ್ತಾಪಗಳನ್ನು ‘ಕ್ರೌರ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಪತ್ನಿಯಿಂದ ವಿಚ್ಛೇದನ ಕೋರಿ ಪತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಜಾರ್ಖಂಡ್‌ನ ಪತಿಯೊಬ್ಬರು ತನ್ನ ಪತ್ನಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಮತ್ತು ಕ್ರೌರ್ಯ ಎಸಗುತ್ತಿದ್ದಾಳೆ ಎಂದು ಆರೋಪಿಸಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಅಲ್ಲಿ ಅವರ ಅರ್ಜಿ ವಜಾಗೊಂಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪತ್ನಿ ತನ್ನ ತಂದೆ-ತಾಯಿಯ ಜೊತೆ ಇರಲು ನಿರಾಕರಿಸುತ್ತಿದ್ದಾಳೆ ಮತ್ತು ಸಣ್ಣ ವಿಷಯಕ್ಕೂ ಜಗಳ ಆಡುತ್ತಾಳೆ ಎಂಬುದು ಪತಿಯ ವಾದವಾಗಿತ್ತು.
ನ್ಯಾಯಮೂರ್ತಿಗಳಾದ ಸುಭಾಷ್ ಚಂದ್ ಮತ್ತು ರಾಜೇಶ್ ಕುಮಾರ್ ಅವರಿದ್ದ ಪೀಠವು ಈ ಪ್ರಕರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ:”ಪ್ರತಿ ಮದುವೆಯಲ್ಲೂ ಸಣ್ಣಪುಟ್ಟ ಏರಿಳಿತಗಳು ಇರುತ್ತವೆ. ದಂಪತಿಗಳ ನಡುವಿನ ಸಾಮಾನ್ಯ ಘರ್ಷಣೆ (Normal wear and tear) ಮತ್ತು ಪರಸ್ಪರ ಹೊಂದಾಣಿಕೆಯ ಕೊರತೆಯನ್ನು ಹಿಂದೂ ವಿವಾಹ ಕಾಯ್ದೆಯಡಿ ‘ಕ್ರೌರ್ಯ’ ಎಂದು ಕರೆಯಲು ಸಾಧ್ಯವಿಲ್ಲ.”
ಸಂಸಾರದಲ್ಲಿ ದಿನನಿತ್ಯ ನಡೆಯುವ ಸಾಮಾನ್ಯ ಜಗಳಗಳು ವಿಚ್ಛೇದನಕ್ಕೆ ಆಧಾರವಾಗಬಾರದು. ಕ್ರೌರ್ಯ ಎಂಬುದು ಸಂಗಾತಿಯು ಜೊತೆಯಲ್ಲಿ ಬದುಕಲು ಅಸಾಧ್ಯ ಎನ್ನುವಷ್ಟು ಗಂಭೀರವಾಗಿರಬೇಕು ಎಂದು ಕೋರ್ಟ್ ಹೇಳಿದೆ.ಪತಿಯು ಮಾಡಿರುವ ಆರೋಪಗಳು ಕೇವಲ ವೈಯಕ್ತಿಕ ಅಸಮಾಧಾನಗಳಾಗಿದ್ದು, ಅವು ಪತ್ನಿಯಿಂದ ನಡೆದ ಗಂಭೀರ ಕ್ರೌರ್ಯ ಎಂದು ಸಾಬೀತುಪಡಿಸಲು ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.








