ಉಡುಪಿ : ಮೂರು ಬಾರಿ ಶಾಸಕನಾಗಿದ್ದ ನನಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ನಾನು ವಿಧಾನಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿಯೇ ಸಿದ್ದ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.
ನಗರದಲ್ಲಿ ನಿನ್ನೆ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಟಿಕೆಟ್ ಸಿಗ್ಲಿಲ್ಲ ಅಂತ ಮೇ 20ರ ವರೆಗೆ ಗಲಾಟೆ ಮಾಡ್ತಾನೆ, ನಂತರ ನಾಮಪತ್ರ ಹಿಂದಕ್ಕೆ ಪಡೀತಾನೆ ಎಂದು ಪಕ್ಷದ ನಾಯಕರು ತಿಳಿದುಕೊಂಡಿದ್ದಾರೆ. ಆದರೆ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ಗೆದ್ದು ಬಿಜೆಪಿಯ ವಿಧಾನಪರಿಷತ್ ಸದಸ್ಯನಾಗುತ್ತೇನೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದರು. ವಿಧಾನಪರಿಷತ್ ಚುನಾವಣೆಯ ಟಿಕೆಟ್ ಘೋಷಣೆಯ ಸಂದರ್ಭದಲ್ಲಿ ನಾಯಕರು ನನ್ನನ್ನು ಕರೆದು ಮಾತನಾಡಿಸಲಿಲ್ಲ. ಟಿಕೆಟ್ ನೀಡದ ಬಗ್ಗೆ ಮನವರಿಕೆ ಮಾಡಲಿಲ್ಲ. ಈಗ ಬಂದು ಸ್ಪರ್ಧಿಸಬೇಡಿ ಎನ್ನುತ್ತಿದ್ದಾರೆ.
ಇಂದು ಅಭಿಮಾನಿಗಳೊಂದಿಗೆ ನಾಮಪತ್ರ
ರಘುಪತಿ ಭಟ್ಟರು ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕಾಗಿ ಉಡುಪಿ, ಮಂಗಳೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿನಿಂದ ಅಭಿಮಾನಿಗಳು ತೆರಳುತ್ತಿದ್ದಾರೆ, ಅದಕ್ಕೆ ಬಸ್ಸಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ನಂತರ ಸಾವಿರಾರು ಅಭಿಮಾನಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.