ತೃಣಮೂಲ ಕಾಂಗ್ರೆಸ್ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ಹಲ್ಲೆಗಳಂತಹ ಘಟನೆಗಳು ನಡೆಯುವ ದೇಶದಲ್ಲಿ “ಬದುಕುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ” ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಹೇಳಿಕೆ ನೀಡಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಭಾರಿ ವಿವಾದ ಭುಗಿಲೆದ್ದಿದೆ.
ಸೋನಾರ್ಪುರಕ್ಕೆ ಭೇಟಿ ನೀಡಿದ್ದ ವೇಳೆ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಜನರು ಕಲ್ಲು, ಮೊಟ್ಟೆಗಳನ್ನು ಎಸೆದು ನಿಂದಿಸಿದ್ದಕ್ಕೆ ಕೆಲವೇ ದಿನಗಳ ನಂತರ ಸಿಬಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇದರ ಮರುದಿನವೇ, ಮತ್ತೊಬ್ಬ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಹೂಗ್ಲಿ ಜಿಲ್ಲೆಯ ಪೊಲೀಸ್ ಠಾಣೆಯೊಂದರ ಮುಂದೆ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ನಾಯಕರ ಮೇಲಿನ ಹಲ್ಲೆಗೆ ಪ್ರತಿಕ್ರಿಯಿಸಿದ ಸಿಬಲ್, “ಇದು ನಾಚಿಕೆಗೇಡಿನ ಸಂಗತಿ, ಸಂಪೂರ್ಣ ನಾಚಿಕೆಗೇಡಿನ ವಿಷಯ. ಇಂತಹ ಘಟನೆಗಳು ನಡೆಯುವ ದೇಶದಲ್ಲಿ ನಾನು ವಾಸಿಸುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಆಡಳಿತಾರೂಢ ರಾಜಕೀಯ ಪಕ್ಷವು ನಮ್ಮ ಗಣರಾಜ್ಯದ ಸ್ಥಾಪನೆಯಾದಾಗ ನಮ್ಮ ಮಹಾನ್ ನಾಯಕರು ಹಾಕಿಕೊಟ್ಟ ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಮಾಡಲು ಯಾವುದೇ ಮಾರ್ಗವನ್ನು ಬಳಸುತ್ತಿದೆ” ಎಂದು ಕಿಡಿಕಾರಿದ್ದಾರೆ.
ಈ ಹೇಳಿಕೆಯ ನಂತರ, ಸೋಮವಾರ ಬಿಜೆಪಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಅವರನ್ನು “ಭಾರತವನ್ನು ದ್ವೇಷಿಸುತ್ತಿದ್ದಾರೆ” ಎಂದು ಆರೋಪಿಸಿರುವ ಬಿಜೆಪಿ, 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಘಟನೆಗಳ ಬಗ್ಗೆ ಅವರು ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ವಿಡಿಯೋ ಹೇಳಿಕೆಯಲ್ಲಿ ಮಾತನಾಡಿ, “ಕಪಿಲ್ ಸಿಬಲ್ ಅವರು ದೇಶದ ಸುಪ್ರೀಂ ಕೋರ್ಟ್ನಲ್ಲಿ ವಕೀಲಿ ವೃತ್ತಿ ನಡೆಸಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ, ಆದರೂ ಭಾರತದಲ್ಲಿ ವಾಸಿಸುತ್ತಿರುವುದಕ್ಕೆ ನಾಚಿಕೆಪಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.








