ಬೆಂಗಳೂರು: “ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಗೆ ಹೋಗುತ್ತಿಲ್ಲ. ಬದಲಿಗೆ ನನ್ನ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳನ್ನು ಪರಿಹರಿಸಲು ಮಂಗಳೂರಿಗೆ ತೆರಳುತ್ತಿದ್ದೇನೆ” ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಕುರಿತಾದ ಚರ್ಚೆಗಳಿಗೆ ತೆರೆ ಎಳೆದರು.
“ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷವೇ ನಿರ್ಧಾರ ಮಾಡುತ್ತದೆ. ಹಿಂದೆ ನನಗೆ ಸಚಿವ ಸ್ಥಾನ ಕೊಟ್ಟಾಗ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಶಾಸಕನಾಗಿದ್ದಾಗ ‘ಸದನ ವೀರ’ ಪ್ರಶಸ್ತಿ ಪಡೆದಿದ್ದೆ, ಸಚಿವನಾಗಿದ್ದಾಗ ನನ್ನ ಕೆಲಸವನ್ನು ಗುರುತಿಸಿ ರಾಷ್ಟ್ರ ಪ್ರಶಸ್ತಿಯೂ ಒಲಿದು ಬಂದಿತ್ತು. ನನ್ನ ಕಾರ್ಯವೈಖರಿಯನ್ನು ನೋಡಿಯೇ ಸಿದ್ದರಾಮಯ್ಯನವರು ಈ ಹಿಂದೆ ನನ್ನನ್ನು ವಿರೋಧ ಪಕ್ಷದ ಉಪನಾಯಕನನ್ನಾಗಿ ಮಾಡಿದ್ದರು. ಈಗ ಸ್ಪೀಕರ್ ಜವಾಬ್ದಾರಿ ನೀಡಿದ್ದಾರೆ, ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಮುಂದೆ ಪಕ್ಷ ಏನು ಜವಾಬ್ದಾರಿ ಕೊಡುತ್ತದೋ ನೋಡೋಣ” ಎಂದರು.
ಮುಂದುವರಿದು ಮಾತನಾಡಿದ ಅವರು, “ನಾನು ಎಂದಿಗೂ ಯಾವುದೇ ಸ್ಥಾನಮಾನವನ್ನು ಬಯಸಿ ಅಥವಾ ಲಾಬಿ ಮಾಡಿ ಪಡೆದವನಲ್ಲ. ಪಕ್ಷ ಏನೇ ತೀರ್ಮಾನ ಕೈಗೊಂಡರೂ ನಾನು ಅದನ್ನು ಸಂತೋಷ ಮತ್ತು ಸಮಾಧಾನದಿಂದ ಸ್ವೀಕರಿಸುತ್ತೇನೆ. ನಾನು ದೆಹಲಿಗೆ ಹೋಗುತ್ತಿಲ್ಲ, ಮಂಗಳೂರಿಗೆ ಹೋಗುತ್ತಿದ್ದೇನೆ” ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.








