ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಮುನ್ನೆಲೆಗೆ ಬಂದಿದ್ದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಹೈಡ್ರಾಮಾಗೆ ಕೊನೆಗೂ ಕ್ಲೈಮ್ಯಾಕ್ಸ್ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಹೌದು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಿಸೈನ್ ಮಾಡಲು ಸಜ್ಜಾಗಿದ್ದಾರೆ ಎಂಬ ಬಿಸಿಬಿಸಿ ಚರ್ಚೆಗಳು ಸದ್ಯ ಕೈ ಪಾಳಯದಲ್ಲಿ ತೀವ್ರಗೊಂಡಿವೆ.
ದೆಹಲಿಯಲ್ಲಿ ನಿನ್ನೆ ಎಐಸಿಸಿ ವರಿಷ್ಠರು ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬರೋಬ್ಬರಿ 7 ಗಂಟೆಗಳ ಕಾಲ ಸುದೀರ್ಘ ಸಂಧಾನ ಸಭೆ ನಡೆದಿದೆ. ಈ ಹೈವೋಲ್ಟೇಜ್ ಮೀಟಿಂಗ್ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಗದ್ದುಗೆಯನ್ನು ಬಿಟ್ಟುಕೊಡಲು ಹಸಿರು ನಿಶಾನೆ ತೋರಿಸಿದ್ದಾರೆ ಎಂಬ ದಟ್ಟ ವದಂತಿಗಳು ಹರಿದಾಡುತ್ತಿವೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ದೆಹಲಿಯ ಮುಚ್ಚಿದ ಕೋಣೆಯೊಳಗೆ ನಿನ್ನೆ ನಡೆದ ಸಭೆಯಲ್ಲಿ ಏನೆಲ್ಲಾ ಮಾತುಕತೆಗಳಾಗಿವೆ ಎಂಬ ಪೂರ್ಣ ಮಾಹಿತಿ ಸದ್ಯಕ್ಕೆ ನಮಗಿಲ್ಲ. ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳು ಬೆಂಗಳೂರಿಗೆ ಆಗಮಿಸಲಿದ್ದು, ನಮ್ಮೊಂದಿಗೆ ಚರ್ಚಿಸಿದ ಬಳಿಕವಷ್ಟೇ ನಿಖರವಾದ ಚಿತ್ರಣ ಸಿಗಲಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ದೆಹಲಿ ಸಭೆಯ ಸಂಪೂರ್ಣ ವಿವರಗಳನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇಂದು ಅಥವಾ ನಾಳೆ ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸಲಿದ್ದಾರೆ. ಈ ಮೂಲಕ ಹೈಕಮಾಂಡ್ ಸಭೆಯ ಒಳಮರ್ಮವಾಗಲಿ ಅಥವಾ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರದ ಸತ್ಯಾಸತ್ಯತೆಯನ್ನಾಗಲಿ ಬಿಟ್ಟುಕೊಡದೆ ಪರಮೇಶ್ವರ್ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಸುದ್ದಿ ಸದ್ಯಕ್ಕೆ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದು, ಸುರ್ಜೇವಾಲಾ ಅವರ ಪ್ರೆಸ್ಮೀಟ್ ಬಳಿಕವೇ ಈ ಬಿಗ್ ಸಸ್ಪೆನ್ಸ್ಗೆ ಅಧಿಕೃತ ತೆರೆ ಬೀಳಬೇಕಿದೆ.








