ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ ಎಂಬ ಚರ್ಚೆಗಳು ಜೋರಾಗಿವೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕ ಸಭೆಗಳನ್ನು ನಡೆಸಿದ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ರಾಜಕಾರಣದ ಮುಂದಿನ ಭವಿಷ್ಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟ ಹಾಗೂ ಆಡಳಿತ ವೈಫಲ್ಯದಿಂದಾಗಿ ರಾಜ್ಯದಲ್ಲಿ ಶೀಘ್ರದಲ್ಲೇ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸರ್ಕಾರದ ವೈಫಲ್ಯ ಒಪ್ಪಿಕೊಂಡ ಹೈಕಮಾಂಡ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಯುವಿಜಯೇಂದ್ರ, “ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ರಾಜ್ಯವನ್ನು ಬರೋಬ್ಬರಿ 10 ಲಕ್ಷ ಕೋಟಿ ರೂಪಾಯಿಗಳ ಸಾಲದ ಸುಳಿಗೆ ದೂಡಿದೆ. ಈ ತೀವ್ರ ಆಡಳಿತಾತ್ಮಕ ವೈಫಲ್ಯವನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಕೊಂಡಿದೆ. ಇದೇ ಕಾರಣಕ್ಕೆ ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಬದಲಾವಣೆಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡಿದೆ” ಎಂದು ವೀಕ್ಷಿಸಿದರು.
ಆಂತರಿಕ ಕಚ್ಚಾಟದಿಂದ ಆಡಳಿತ ಕುಸಿತ
ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಮತ ಹಾಗೂ ಅಧಿಕಾರದ ಕಿತ್ತಾಟದಿಂದಾಗಿ ರಾಜ್ಯದ ಒಟ್ಟಾರೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇತ್ತೀಚೆಗೆ ನಡೆದ ಉಪಚುನಾವಣೆಗಳ ಫಲಿತಾಂಶವು ಸರ್ಕಾರದ ಜನಪ್ರಿಯತೆಗೆ ಯಾವುದೇ ಮಾನದಂಡವಾಗುವುದಿಲ್ಲ. ಉಪಚುನಾವಣೆಗಳಲ್ಲಿ ಗೆದ್ದಿದ್ದರೂ ಸಹ ಹೈಕಮಾಂಡ್ ಸಿಎಂ ರಾಜೀನಾಮೆ ಪಡೆಯುತ್ತಿರುವುದೇ ಸರ್ಕಾರದ ವಿಫಲತೆಗೆ ಸಾಕ್ಷಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶೀಘ್ರದಲ್ಲೇ ರಾಜ್ಯದಲ್ಲಿ ಚುನಾವಣೆ
ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ಉಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಆಡಳಿತ ಪಕ್ಷದೊಳಗಿನ ಗೊಂದಲಗಳು ಮತ್ತಷ್ಟು ತಾರಕಕ್ಕೇರಲಿದ್ದು, ರಾಜ್ಯದಲ್ಲಿ ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆ ಎದುರಾಗುವುದು ನಿಶ್ಚಿತ ಎಂದು ವಿಜಯೇಂದ್ರ ಅವರು ಭವಿಷ್ಯ ನುಡಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಲಿವೆ ಎಂಬ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.








