ಹಾವೇರಿ : ಹಾವೇರಿ ರೈಲು ನಿಲ್ದಾಣದ ಬಳಿ ಇರುವ ಓವರ್ ಬ್ರಿಡ್ಜ್ನಲ್ಲಿ ಅಕ್ರಮವಾಗಿ ಸುಮಾರು 7.91 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ನಗರ ಠಾಣೆಯ ಪೊಲೀಸರು ದಾಳಿ ಮಾಡಿ, ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದು ನಾಲ್ವರನ್ನು ಇದೆ ವೇಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದಿಳ್ಳೆಪ್ಪ ಮಲ್ಲಪ್ಪ ಅಳಲಗೇರಿ, ಫಾರೂಕ್ ಅಹ್ಮದ್ ಕುಂಚೂರು, ಇಸ್ಮಾಯಿಲ್ ನದಾಫ್ ಮತ್ತು ಸಾಹಿಲ್ ಕರ್ಜಗಿ ಎಂದು ಗುರುತಿಸಲಾಗಿದೆ. ಹಾವೇರಿ ರೈಲು ನಿಲ್ದಾಣದ ಬಳಿ ಇರುವ ಓವರ್ ಬ್ರಿಡ್ಜ್ನಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದಾಗ ನಾಲ್ವರು ಆರೋಪಿಗಳು ಪೊಲೀಸರಿಗೆ ಸೆರೆಸಿಕ್ಕಿದ್ದಾರೆ.
ಹಾವೇರಿಯ ನಾಲ್ವರು ಆರೋಪಿಗಳು ಒಡಿಶಾದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಚಿಲ್ಲರೆ ಗ್ರಾಹಕರಿಗೆ ಮಾರಾಟ ಮಾಡಲು ಗಾಂಜಾವನ್ನು ರೈಲಿನ ಮೂಲಕ ಹಾವೇರಿಗೆ ತಂದಿದ್ದರು. ಖಚಿತ ಮಾಹಿತಿ ಮೇರೆಗೆ ಹಾವೇರಿ ನಗರ ಪೊಲೀಸ್ ಠಾಣೆಯ ಸಿಪಿಐ ಮೋತಿಲಾಲ್ ಪವಾರ್ ಮತ್ತು ತಂಡ ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿತ್ತು. ಅಲ್ಲದೆ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಒಡಿಶಾ ರಾಜ್ಯದಲ್ಲಿ ಕಡಿಮೆ ಬೆಲೆಗೆ ಸಿಗುವ ಗಾಂಜಾದ ಹೂವು, ಮೊಗ್ಗು, ಬೀಜ ಮಿಶ್ರಿತ ಗಂಟು ಗಂಟಾದ ಒಣಗಿದ ಘಾಟು ವಾಸನೆಯುಳ್ಳ ಗಾಂಜಾ ಸಾಗಿಸುತ್ತಿದ್ದರು. ಅಲ್ಲಿಂದ ಕೆಜಿಗಟ್ಟಲೆ ಗಾಂಜಾ ತಂದು ನಂತರ ಅದನ್ನು 10 ಗ್ರಾಂ ಸೇರಿದಂತೆ ವಿವಿಧ ಗ್ರಾಂ ಲೆಕ್ಕದಲ್ಲಿ ಪ್ಯಾಕೆಟ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.