ಮೆಕ್ಸಿಕೋ ಸಿಟಿ: ವಿಶ್ವವಿಖ್ಯಾತ ಮೆಕ್ಸಿಕೋದ ಟಿಯೋಟಿಹುವಾಕನ್ (Teotihuacan) ಪುರಾತತ್ವ ತಾಣದಲ್ಲಿ ಇಂದು (ಏಪ್ರಿಲ್ 20, 2026) ದುಷ್ಕರ್ಮಿಯೊಬ್ಬ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಪಿರಮಿಡ್ ಆಫ್ ದಿ ಮೂನ್ (Pyramid of the Moon) ಮೇಲ್ಭಾಗದಿಂದ ನಡೆದ ಈ ದಾಳಿಯಲ್ಲಿ ಕೆನಡಾದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅಮೆರಿಕ ಮತ್ತು ರಷ್ಯಾ ಮೂಲದ ಪ್ರವಾಸಿಗರು ಸೇರಿದಂತೆ ಕನಿಷ್ಠ 13 ಮಂದಿ ಗಾಯಗೊಂಡಿದ್ದಾರೆ.
ಸುಮಾರು 27 ವರ್ಷದ ಜೂಲಿಯೊ ಸಿಜರ್ ಎಂಬ ವ್ಯಕ್ತಿ ಪಿರಮಿಡ್ನ ಮೇಲ್ಭಾಗಕ್ಕೆ ಏರಿ ಅಲ್ಲಿಂದ ಕೆಳಗಿದ್ದ ಪ್ರವಾಸಿಗರ ಮೇಲೆ ಸುಮಾರು 20 ರಿಂದ 30 ಸುತ್ತು ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಆತ ತಾನೇ ಗುಂಡು ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಾಳಿಯಲ್ಲಿ 32 ವರ್ಷದ ಕೆನಡಾದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 6 ಅಮೆರಿಕನ್ನರು, 3 ಕೊಲಂಬಿಯನ್ನರು ಮತ್ತು ರಷ್ಯಾ ಹಾಗೂ ಬ್ರೆಜಿಲ್ನ ಪ್ರವಾಸಿಗರು ಸೇರಿದ್ದಾರೆ. ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.
ಪ್ರವಾಸಿಗರು ಪ್ರಾಣ ಉಳಿಸಿಕೊಳ್ಳಲು ಮೆಟ್ಟಿಲುಗಳ ಹಿಂದೆ ಅಡಗಿಕೊಳ್ಳುತ್ತಿರುವ ಮತ್ತು ಕಿರುಚುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದಾಳಿಕೋರನು ಅಮೆರಿಕದ ಕೊಲಂಬೈನ್ ಶಾಲೆಯ ಗುಂಡಿನ ದಾಳಿಯನ್ನು ನೆನಪಿಸುವಂತಹ ಟಿ-ಶರ್ಟ್ ಧರಿಸಿದ್ದ ಎಂದು ವರದಿಯಾಗಿದೆ.
ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಈ ಘಟನೆಯನ್ನು ಖಂಡಿಸಿದ್ದು, ಕೆನಡಾ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








