ಬೆಂಗಳೂರು: ರಾಜ್ಯ ಸರ್ಕಾರದಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಲುವಾಗಿ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಈ ಜಾಹೀರಾತಿನಲ್ಲಿ ನೆಹರೂ ಅವರ ಭಾವಚಿತ್ರವನ್ನೇ ಕೈಬಿಟ್ಟಿರೋದಕ್ಕೆ ವಿಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದವು. ಈ ಬಗ್ಗೆ ಬಿಜೆಪಿಯ ನಾಯಕರು ಬಿಡುಗಡೆ ಮಾಡಿರುವಂತ ಪತ್ರಿಕಾ ಹೇಳಿಕೆಯಲ್ಲಿಯೇ ಗೊಂದಲಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ರೇಖಾಚಿತ್ರ ಹಾಕಲಾಗಿದೆ ಅಂತ ಒಬ್ಬರು ಹೇಳಿದ್ರೇ.. ಮತ್ತೊಬ್ಬ ನಾಯಕರು ಉದ್ದೇಶಪೂರ್ವಕವಾಗಿಯೇ ನೆಹರೂ ಭಾವಚಿತ್ರ ಕೈಬಿಡಲಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಹಾಗಾದ್ರೇ ಯಾವುದು ನಿಜ.? ಯಾವುದು ಸತ್ಯ ಎಂಬುದೇ ಗೊಂದಲಕ್ಕೆ ದೂಡುವಂತೆ ಮಾಡಿದೆ.
ಇಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ತಮ್ಮ ಬಹಿರಂಗ ಪತ್ರದ ಮೂಲಕ ಅರ್ಥಹೀನವಾಗಿ ವ್ಯರ್ಥ ಪ್ರಲಾಪವನ್ನು ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ. ಇದು ಖಂಡನೀಯ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ,ಮಹೇಶ್ ಅವರು ತಿಳಿಸಿದ್ದರು.
ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಇಂದಿನ ಸರಕಾರಿ ಜಾಹೀರಾತಿನಲ್ಲಿ ಲೈನ್ ಡಯಾಗ್ರಮ್ನಲ್ಲಿ ಮೇಲ್ಭಾಗದಲ್ಲೇ ಮುದ್ರಿಸಲಾಗಿದೆ. ಕಾಂಗ್ರೆಸ್ಸಿಗರಿಗೆ ಎಂದೂ ಕೂಡ ಒಂದು ಕುಟುಂಬದ ನಿಷ್ಠೆಯೇ ಪ್ರಮುಖವಾಗಿದೆ. ಯಾವತ್ತು ಒಂದು ಕುಟುಂಬಕ್ಕೆ ಘಾಸಿ ಆಗುತ್ತದೋ ಅದು ಪಕ್ಷಕ್ಕೇ ಘಾಸಿ ಎಂದುಕೊಳ್ಳುವ ಪ್ರವೃತ್ತಿ ಅವರದು ಎಂದು ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದವರು ಇಂದಿರಾ ಎಂದರೆ ಇಂಡಿಯಾ, ನೆಹರೂ ಎಂದರೆ ಇಂಡಿಯಾ ಎಂದು ಭಾವಿಸಿದವರಿಗೆ ಸಮಗ್ರ ರಾಷ್ಟ್ರದ ಪರಿಕಲ್ಪನೆ ಇಲ್ಲ. 75 ವರ್ಷದ ಆಚರಣೆ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಒಳಗೊಂಡ ಜಾಹೀರಾತು ಕೊಡಲಾಗಿದೆ. ಹಿಂದೆ ಇದನ್ನೆಲ್ಲ ಕಾಣಲು ಸಾಧ್ಯವಿರಲಿಲ್ಲ. ಜಾಹೀರಾತುಗಳೂ ಒಂದು ಕುಟುಂಬಕ್ಕೆ ಸೀಮಿತಗೊಳ್ಳುತ್ತಿದ್ದವು ಎಂದು ಅವರು ನೆನಪಿಸಿದ್ದಾರೆ.
ಇಡೀ ಕಾಂಗ್ರೆಸ್ ಪಕ್ಷವು ಇಷ್ಟು ವರ್ಷಗಳ ಕಾಲ ಸ್ವಾತಂತ್ರ್ಯೋತ್ಸವವನ್ನು ಒಂದು ಕುಟುಂಬಕ್ಕೆ ಸೀಮಿತವಾಗಿ ಆಚರಿಸುತ್ತ ಬಂದಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಪ್ರಮಾಣದ ಪ್ರಯತ್ನ ಮಾಡಿ ಇಡೀ ದೇಶವನ್ನು ಜೋಡಿಸಿದ ಹಾಗೂ ಇವತ್ತಿನ ಭಾರತವನ್ನು ಹಂಚಿಹೋಗದಂತೆ ಉಳಿಸಿದ ಅವತ್ತಿನ ಉಕ್ಕಿನ ಮನುಷ್ಯರೆನಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಸ್ಮರಿಸಲೇ ಇಲ್ಲ. ಬದಲಾಗಿ ಅವರನ್ನು ಮರೆತುಬಿಟ್ಟಿತು ಎಂದಿದ್ದಾರೆ.
ಜಗತ್ತಿಗೇ ಶ್ರೇಷ್ಠ ಎನಿಸಿದ ಸಂವಿಧಾನವನ್ನು ನೀಡಿದ ಡಾ. ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರನ್ನು ಸ್ವಾರ್ಥದ ಕಾರಣಕ್ಕಾಗಿ ಸೋಲಿಸಿದ ಪಕ್ಷವೇ ಕಾಂಗ್ರೆಸ್ ಎಂಬುದು ಜನರಿಗೆ ತಿಳಿದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕೆಲಸ ಮಾಡಿದ್ದ ಮತ್ತು ಶ್ರಮಿಸಿದ್ದ ಕಾಮರಾಜ್ ಮತ್ತು ಇತರ ನಾಯಕರನ್ನು ನೆನೆಸಿಕೊಳ್ಳದೆ ಅವರ ಸ್ಮರಣೆಯನ್ನೂ ಕೈಬಿಟ್ಟಿತು. ಸ್ವತಃ ಆ ಪಕ್ಷದ ಪ್ರಧಾನಿ ನರಸಿಂಹರಾವ್ ಅವರು ಮೃತಪಟ್ಟಾಗ ಅವರ ದೇಹವನ್ನು ಎಐಸಿಸಿ ಕಚೇರಿಗೆ ಕರೆತರದೆ ಇರುವಷ್ಟು ವಿರೋಧಿಸಿತ್ತು ಎಂದು ಅವರು ವಿವರಿಸಿದ್ದಾರೆ.
Shocking News: ಮಡಕೆಯಿಂದ ನೀರು ಕುಡಿದಿದ್ದಕ್ಕೆ ದಲಿತ ಬಾಲಕನನ್ನು ಕೊಂದ ಶಿಕ್ಷಕ
ಇವತ್ತು ನೆಹರೂ ಅವರ ಭಾವಚಿತ್ರ ಕರ್ನಾಟಕ ಸರಕಾರದ ಜಾಹೀರಾತಿನಲ್ಲಿ ಮೇಲ್ಭಾಗದಲ್ಲೇ ಇದೆ. ಒಬ್ಬ ವ್ಯಕ್ತಿಗಾಗಿ ಹಾಗೂ ವ್ಯಕ್ತಿಪೂಜೆ ಮಾಡುವ ದೃಷ್ಟಿಯಿಂದ ರಾಷ್ಟ್ರವನ್ನು ಕಡೆಗಣಿಸಲು ಕಾಂಗ್ರೆಸ್ ಪಕ್ಷ ತಯಾರಾಗಿದೆ. ರಾಷ್ಟ್ರಕ್ಕಿಂತ ವ್ಯಕ್ತಿ ದೊಡ್ಡ ಎಂಬ ನಂಬಿಕೆ ಕಾಂಗ್ರೆಸ್ನವರದು ಎಂದು ಟೀಕಿಸಿದ್ದಾರೆ.
ಮೂಲ ಕಾಂಗ್ರೆಸ್ಸಿಗರಿಗೆ ಇದೇನೂ ಪ್ರಮುಖ ವಿಷಯ ಅನಿಸಲಿಲ್ಲ ಎಂಬುದು ದುಃಖದ ಸಂಗತಿ. ವಲಸೆ ಬಂದ ಕಾಂಗ್ರೆಸ್ಸಿಗ ಮತ್ತು ವಕ್ತಾರ ರಮೇಶ್ ಬಾಬು ಅವರಿಗೆ ಇದೊಂದು ಮಹತ್ವದ ವಿಷಯ ಅನಿಸಿದೆ. ಕಾಂಗ್ರೆಸ್ ನೈತಿಕವಾಗಿ ಎಷ್ಟು ಕುಸಿದಿದೆ ಎಂದರೆ ಮತ್ತೊಮ್ಮೆ ಇನ್ಯಾವತ್ತಾದರೂ ರಾಷ್ಟ್ರವೇ ಬೇಡ ಎಂಬ ಹಂತಕ್ಕೆ ತಲುಪಿದರೆ ಅದು ಅತಿಶಯೋಕ್ತಿಯಲ್ಲ ಎಂದು ತಿಳಿಸಿದ್ದಾರೆ.
ಜಾಹೀರಾತಿನಲ್ಲಿ ಪ್ರಕಟಿಸಿದ ಎಲ್ಲ ಭಾವಚಿತ್ರಗಳು ಮತ್ತು ಮೇಲೆ ಲೈನ್ ಡಯಾಗ್ರಮ್ನಲ್ಲಿ ಪ್ರಕಟಿಸಿದ ಚಿತ್ರಗಳೆಲ್ಲವೂ ನೈಜ ಸ್ವಾತಂತ್ರ್ಯ ಹೋರಾಟಗಾರರದು. ಅವರು ರಾಜಕೀಯ ಹೋರಾಟಗಾರರಲ್ಲ ಎಂಬುದೂ ರಮೇಶ್ ಬಾಬು ಅವರಿಗೆ ಅರ್ಥವಾಗಿಲ್ಲ. ಅದನ್ನು ಸರಿಯಾಗಿ ಗಮನಿಸಿ ವಿಶ್ಲೇಷಿಸದೆ ಈ ಥರದ ನಿರ್ಧಾರಕ್ಕೆ ಬಂದಿರುವುದು ಮೂರ್ಖತನದ ಪರಮಾವಧಿಯಲ್ಲದೆ ಮತ್ತೇನಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
VIRAL NEWS: ಮಠ ಬಿಟ್ಟು ಮದುವೆಯಾದ ಹುಡುಗಿ ಜೊತೆಗೆ ಎಸ್ಕೇಪ್ ಆದ ಸ್ವಾಮೀಜಿ : ಇಲ್ಲಿದೆ ಪತ್ರ
ಕಾಂಗ್ರೆಸ್ನ ನೈತಿಕ ದಿವಾಳಿ ಇಷ್ಟು ಅಧಃಪತನಕ್ಕೆ ಬಂದಿದೆ; 75 ವರ್ಷಗಳ ಈ ರಾಷ್ಟ್ರಜೀವನದ ಒಳಗಡೆ ಎಷ್ಟೊಂದು ಜನರ ಬಲಿದಾನ, ಸಂಘರ್ಷ, ತ್ಯಾಗದ ಪರಿಣಾಮವಾಗಿ ಈ ಹಂತಕ್ಕೆ ರಾಷ್ಟ್ರ ಬಂದಿದೆ. ಈ ಸಂದರ್ಭದಲ್ಲಿ ನಮ್ಮೆಲ್ಲರ ವೈಯಕ್ತಿಕ ಹಿತಾಸಕ್ತಿ, ಭೇದಗಳನ್ನು ಪಕ್ಕಕ್ಕಿಟ್ಟು ಸ್ವಾತಂತ್ರ್ಯ ತಂದು ಕೊಟ್ಟ ಹಿರಿಯರನ್ನು ಸ್ಮರಿಸುವುದು ಮತ್ತು ಅವರ ಆಶಯಗಳ ಅನುಷ್ಠಾನ ಮೂಲ ಮಂತ್ರವಾಗಬೇಕಿತ್ತು. ಆದರೆ, ಸ್ವಾತಂತ್ರ್ಯ ಹೋರಾಟದ ಇಂಥ ಸಂದರ್ಭದಲ್ಲೂ ಕೂಡ ಭಟ್ಟಂಗಿ ಮತ್ತು ಸ್ವಾರ್ಥಪರ ರಾಜಕಾರಣವನ್ನು ಕಾಂಗ್ರೆಸ್ಸಿಗರು ಮಾಡುತ್ತಿರುವುದು ಅವರ ಚಿಂತನೆಯನ್ನು ನಗ್ನರನ್ನಾಗಿ ಮಾಡಿದೆ. ಜನತೆ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ವಿಸರ್ಜನೆ ಮಾಡಬೇಕೆಂದು ಆಸೆ ಪಟ್ಟಿದ್ದರು. ಕಾಂಗ್ರೆಸ್ ಪಕ್ಷ ಈಗಾಗಲೇ ಜನಮಾನಸದಿಂದ ಮತ್ತು ನೈತಿಕ ನೆಲೆಯಲ್ಲಿ ದೇಶದೆಲ್ಲೆಡೆ ವಿಸರ್ಜನೆ ಆಗಿದೆ. ಅಂತಃಚೇತನದ ಲವಲೇಶವೂ ಕಾಂಗ್ರೆಸ್ನಲ್ಲಿ ಈಗ ಉಳಿದಿಲ್ಲ. ಕಾಂಗ್ರೆಸ್ ಪಕ್ಷವು ಇವತ್ತು ಮೆದುಳು ನಿಷ್ಕ್ರಿಯವಾದ ದೇಹದಂತೆ ನಿóಶ್ಚಲ- ನಿರ್ಜೀವ ಸ್ಥಿತಿಗೆ ತಲುಪಿದೆ. ಆಸ್ಪತ್ರೆಯ ಐಸಿಯುವಿನಲ್ಲಿ ಇರುವ ಸಂವೇದನಾಶೂನ್ಯ ದೇಹದಂತೆ ಅದು ಉಳಿದಿದೆ. ಭಟ್ಟಂಗಿತನಕ್ಕೆ ಮತ್ತೊಂದಷ್ಟು ವೇದಿಕೆ ಕಲ್ಪಿಸುವ ರಾಜಕೀಯ ಬೃಹನ್ನಳೆ ನಾಟಕ ಮುಂದುವರಿದಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಇವರ ಬೆನ್ನಲ್ಲೇ.. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು, ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷದ ಶೇ 5ರಷ್ಟು ರ್ಯಾಲಿಗಳನ್ನೂ ಮಾಡುತ್ತಿಲ್ಲ. ಬೆಂಗಳೂರಿನ ಈ ಕಾರ್ಯಕ್ರಮವನ್ನು ಮುಂಚಿತವಾಗಿಯೇ ಯೋಜಿಸಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ಚಾಮರಾಜಪೇಟೆ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಕಾರಣ ಯಾರೆಂದು ತಮಗೆಲ್ಲರಿಗೂ ಗೊತ್ತಿದೆ. ರಾಷ್ಟ್ರಧ್ವಜಾರೋಹಣಕ್ಕೆ ಬಿಗಿ ಬಂದೋಬಸ್ತ್ ಯಾಕೆ ಏರ್ಪಡಿಸಲಾಗಿದೆ ಎಂದು ನಿಮಗೂ ತಿಳಿದಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು ಎಂದರು.
ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂಬ ಮಹಾತ್ಮ ಗಾಂಧಿಯವರ ಸೂಚನೆಯನ್ನು ನೆಹರೂ ಅವರು ಪಾಲಿಸಲಿಲ್ಲ ಎಂದೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ನೆಹರೂ ಭಾರತ ದೇಶ ವಿಭಜನೆಗೆ ಕಾರಣಕರ್ತರು ಎಂದು ಆರೋಪಿಸಿದರು. ದೇಶ ವಿಭಜನೆಯ ಕರಾಳ ನೆನಪು ಎಂದು ಆಚರಿಸಲಾಗುತ್ತಿದೆ. ದೇಶ ವಿಭಜನೆಗೆ ಕಾರಣಕರ್ತರಾದ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಜಾಹೀರಾತಿನಲ್ಲಿ ಬಿಟ್ಟಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.