ಬೆಂಗಳೂರು: ರಾಜ್ಯದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಮತ್ತು ಬೆಳೆದ ಫಸಲನ್ನು ಸಾಗಿಸಲು ಪಕ್ಕದ ಖಾಸಗಿ ಜಮೀನುಗಳಲ್ಲಿನ ಕಾಲುದಾರಿ ಅಥವಾ ಬಂಡಿದಾರಿಗಳನ್ನು ಬಳಸುವಾಗ ಎದುರಿಸುತ್ತಿದ್ದ ದೊಡ್ಡ ಸಮಸ್ಯೆಗೆ ಕರ್ನಾಟಕ ಸರ್ಕಾರ ಮಹತ್ವದ ಪರಿಹಾರ ಸೂಚಿಸಿದೆ. ಗ್ರಾಮ ನಕ್ಷೆ (ಮ್ಯಾಪ್) ಹಾಗೂ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ದಾರಿಗಳನ್ನು ಬಂದ್ ಮಾಡುವ ಅಥವಾ ಅಡ್ಡಿಪಡಿಸುವ ಭೂಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ತಹಶೀಲ್ದಾರ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ರೈತರ ದಾರಿ ಸಮಸ್ಯೆಗೆ ಕಾರಣವೇನು?
ರಾಜ್ಯದಾದ್ಯಂತ ರೈತರು ತಮ್ಮ ಕೃಷಿ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಮತ್ತು ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಅಕ್ಕಪಕ್ಕದ ಖಾಸಗಿ ಜಮೀನುಗಳ ದಾರಿಯನ್ನೇ ಅವಲಂಬಿಸಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಹೊಂದಾಣಿಕೆಯ ಕೊರತೆಯಿಂದಾಗಿ ಕೆಲವು ಭೂಮಾಲೀಕರು ಇಂತಹ ಸಾಂಪ್ರದಾಯಿಕ ದಾರಿಗಳನ್ನು ಮುಚ್ಚುತ್ತಿರುವುದು ಅಥವಾ ರೈತರು ಓಡಾಡದಂತೆ ಅಡ್ಡಿಪಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಫಸಲು ನಷ್ಟ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು.
ಕಾನೂನು ಏನು ಹೇಳುತ್ತದೆ?
ಸರ್ಕಾರದ ಸುತ್ತೋಲೆಯ ಪ್ರಕಾರ, ರೈತರ ದಾರಿಯ ಹಕ್ಕುಗಳನ್ನು ರಕ್ಷಿಸಲು ಎರಡು ಪ್ರಮುಖ ಕಾನೂನು ಅವಕಾಶಗಳಿವೆ:
ಕರ್ನಾಟಕ ಭೂ ಕಂದಾಯ ನಿಯಮಗಳು, 1966 (ನಿಯಮ 59): ಇದರ ಅಡಿಯಲ್ಲಿ ‘ದಾರಿಯ ಹಕ್ಕುಗಳು’ ಮತ್ತು ಇತರ ಅನುಭೋಗದ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದ್ದು, ಸಂಬಂಧಪಟ್ಟ ಜಮೀನಿನ ಭಾಗಿದಾರರು ಒಪ್ಪಿರುವ ಸಂದರ್ಭದಲ್ಲಿ ಈ ಹಕ್ಕುಗಳನ್ನು ಅಧಿಕೃತ ದಾಖಲೆ ರಿಜಿಸ್ಟರ್‌ನಲ್ಲಿ ನಮೂದಿಸಲು ಅವಕಾಶವಿದೆ.
ದಿ ಇಂಡಿಯನ್ ಈಸ್ಮೆಂಟ್ ಆಕ್ಟ್, 1882 (The Indian Easement Act, 1882): ಈ ಕಾಯ್ದೆಯನ್ವಯ ಪ್ರತಿ ಜಮೀನಿನ ಮಾಲೀಕರು ಅಥವಾ ಅನುಭವದಾರರು ತಮ್ಮ ಭೂಮಿಯನ್ನು ಪ್ರವೇಶಿಸಲು ಮತ್ತು ವಹಿವಾಟು ನಡೆಸಲು ‘ಈಸ್ಮೆಂಟ್’ (Easement) ಹಕ್ಕನ್ನು ಹೊಂದಿರುತ್ತಾರೆ. ಇದನ್ನು ಬಾಜುಬದಿಯವರು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಅಥವಾ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
ತಹಶೀಲ್ದಾರ್‌ಗಳಿಗೆ ಸಿಕ್ಕ ಅಧಿಕಾರವೇನು?
ಒಂದು ವೇಳೆ ಗ್ರಾಮ ನಕ್ಷೆಯಲ್ಲಿರುವ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಇತರ ರೈತರು ತಿರುಗಾಡಲು ಬಿಡದೆ ಅಡ್ಡಿಪಡಿಸಿದರೆ ಅಥವಾ ದಾರಿಯನ್ನೇ ಮುಚ್ಚಿ ಹಾಕಿದರೆ, ಸ್ಥಳೀಯ ತಹಶೀಲ್ದಾರ್‌ಗಳು ತಕ್ಷಣವೇ ಮಧ್ಯಪ್ರವೇಶಿಸಿ ಅಂತಹ ಅಡೆತಡೆಗಳನ್ನು ತೆರವುಗೊಳಿಸಿ ದಾರಿಯನ್ನು ಸುಗಮಗೊಳಿಸಲು ಸರ್ಕಾರ ಸೂಚಿಸಿದೆ.
ಅಲ್ಲದೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), 1973ರ ಕಲಂ 147ರ ಅನ್ವಯ ಭೂಮಿ ಮತ್ತು ನೀರಿನ ಹಕ್ಕಿನ ಬಳಕೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಶಾಂತಿ ಭಂಗ ಉಂಟಾಗುವ ಸಂದರ್ಭ ಎದುರಾದರೆ, ತಹಶೀಲ್ದಾರ್‌ಗಳು ‘ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್’ ಆಗಿ ಕಾನೂನು ರೀತ್ಯಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಭೂ ಮಂಜೂರಾತಿ-1) ವಿಮಲಮ್ಮ ಸಿ. ಅವರು ಹೊರಡಿಸಿರುವ ಈ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಆದೇಶದಿಂದಾಗಿ ದಾರಿ ವಿವಾದಗಳಿಂದಾಗಿ ವರ್ಷಗಟ್ಟಲೆ ಕೋರ್ಟ್, ಕಚೇರಿ ಅಲೆಯುತ್ತಿದ್ದ ಮತ್ತು ನೆರೆಹೊರೆಯವರೊಂದಿಗೆ ಜಗಳ ಕಾಯುತ್ತಿದ್ದ ಲಕ್ಷಾಂತರ ರೈತರಿಗೆ ನಿರಾಳತೆ ಸಿಕ್ಕಂತಾಗಿದೆ. ತಹಶೀಲ್ದಾರ್ ಮಟ್ಟದಲ್ಲೇ ಇನ್ನು ಮುಂದೆ ಇಂತಹ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ದೊರೆಯಲಿದೆ.









