ಬೆಂಗಳೂರು: ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಜಟಾಪಟಿ ತಾರಕಕ್ಕೇರಿದೆ. ಈ ಯೋಜನೆ ಜಾರಿಯಾದರೆ ಡಿ.ಕೆ. ಶಿವಕುಮಾರ್ ಅವರಿಗೆ ಕ್ರೆಡಿಟ್ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕಾಗಿ ಯೋಜನೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಯೋಜನೆಯ ಪ್ರಗತಿಯ ಕುರಿತು ಮಾತನಾಡಿದ ಶಾಸಕರು, ಬಿಡದಿ ಟೌನ್‌ಶಿಪ್‌ಗಾಗಿ ಭೂಮಿ ನೀಡಲು ಬಹುತೇಕ ರೈತರು ಮತ್ತು ಸಾರ್ವಜನಿಕರು ಈಗಾಗಲೇ ಸ್ವಇಚ್ಛೆಯಿಂದ ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಅಧಿಕೃತ ಅಧಿಸೂಚನೆ (ನೋಟಿಫಿಕೇಶನ್) ಕೂಡ ಪ್ರಕಟವಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಸರ್ಕಾರ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಇವತ್ತಲ್ಲದಿದ್ದರೆ ನಾಳೆಯಾದರೂ ಈ ಭಾಗದಲ್ಲಿ ಭೂ ಅಭಿವೃದ್ಧಿ ಹಾಗೂ ಕೈಗಾರಿಕಾ ಪ್ರಗತಿ ಆಗಲೇಬೇಕು. ಆದರೆ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಈ ಅಭಿವೃದ್ಧಿ ಕೆಲಸ ನಡೆಯಬಾರದು ಎಂಬ ಸಂಕುಚಿತ ಮನೋಭಾವದಿಂದ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಹೆಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ನಿಲುವುಗಳನ್ನು ಟೀಕಿಸಿದ ಬಾಲಕೃಷ್ಣ, “ಕುಮಾರಸ್ವಾಮಿ ಅವರು ದಿನಕ್ಕೊಂದು ವೇಷ ಬದಲಿಸುವ ‘ಗೋಸಂಬಿ’ (ಊಸರವಳ್ಳಿ) ರಾಜಕಾರಣ ಮಾಡುತ್ತಿದ್ದಾರೆ. ಅವರು ಮೊದಲು ಇಂತಹ ದ್ವಂದ್ವ ನಿಲುವುಗಳ ರಾಜಕಾರಣವನ್ನು ಬಿಡಬೇಕು,” ಎಂದು ಲೇವಡಿ ಮಾಡಿದರು. ಅಲ್ಲದೆ, ಬಿಡದಿ ಯೋಜನೆ ವಿಷಯದಲ್ಲಿ ಯಾರದ್ದು ಸತ್ಯ, ಯಾರದ್ದು ಸುಳ್ಳು ಎಂಬುದನ್ನು ಸಾಬೀತುಪಡಿಸಲು ಅವರು ಸವಾಲು ಹಾಕಿದ್ದಾರೆ. “ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡೇಶ್ವರಿ ತಾಯಿ ಮೇಲೆ ಬಂದು ಪ್ರಮಾಣ ಮಾಡಲಿ, ನಾವು ನಮ್ಮ ಆರಾಧ್ಯ ದೈವ ಅಜ್ಜಯ್ಯನ (ಕಾಲಭೈರವೇಶ್ವರ) ಮೇಲೆ ಪ್ರಮಾಣ ಮಾಡಲು ಸಿದ್ಧರಿದ್ದೇವೆ” ಎಂದು ಬಹಿರಂಗ ಸವಾಲು ಎಸೆದಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಹಳೆಯ ವಿಡಿಯೋ ಒಂದನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿ ಸಂಚಲನ ಮೂಡಿಸಿದರು. ಕುಮಾರಸ್ವಾಮಿ ಅವರು ಈ ಹಿಂದೆ ಮಂತ್ರಿಯಾಗಿದ್ದಾಗ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದ ದೃಶ್ಯಗಳು ಅದಲ್ಲಿದ್ದವು. “ನಮ್ಮ ಭಾಗದ ಜನರಿಗೆ ನ್ಯಾಯ ಸಿಗಬೇಕು, ಅವರಿಗೆ ಜಾಗ ಸಿಗಬೇಕು ಎಂಬ ಉದ್ದೇಶದಿಂದಲೇ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ (ಡೆವಲಪ್ಡ್ ಏರಿಯಾ) ರೈತರಿಗೆ ಶೇಕಡಾ 40 ರಷ್ಟು ಪಾಲು ಕೊಡಬೇಕು ಎಂದು ನಾನೇ ತೀರ್ಮಾನ ಮಾಡಿದ್ದೆ” ಎಂದು ಕುಮಾರಸ್ವಾಮಿ ಅವರೇ ಆ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಬಾಲಕೃಷ್ಣ ವಿವರಿಸಿದರು.
ಕುಮಾರಸ್ವಾಮಿ ಅವರು ರಾಜ್ಯದಲ್ಲಿದ್ದಾಗ ಯೋಜನೆ ಪರವಾಗಿ ಮಾತನಾಡಿ, ಈಗ ಕೇಂದ್ರ ಸಚಿವರಾದ ಮೇಲೆ ರಾಜಕೀಯ ದ್ವೇಷಕ್ಕಾಗಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಬಾಲಕೃಷ್ಣ ಆರೋಪಿಸಿದರು. ಅಂದು ತಾವೇ ಶೇ. 40 ರಷ್ಟು ಭೂಮಿ ನೀಡುವ ತೀರ್ಮಾನ ಕೈಗೊಂಡು, ಇಂದು ಅದೇ ಯೋಜನೆಯನ್ನು ವಿರೋಧಿಸುತ್ತಿರುವುದು ಅವರ ಇಬ್ಬಂದಿ ತನವನ್ನು ತೋರಿಸುತ್ತದೆ. ರಾಜಕೀಯ ಏನೇ ಇರಲಿ, ಬಿಡದಿ ಭಾಗದ ಜನರ ಮತ್ತು ರೈತರ ಹಿತದೃಷ್ಟಿಯಿಂದ ಈ ಟೌನ್‌ಶಿಪ್ ಯೋಜನೆ ಜಾರಿಯಾಗುವುದು ನಿಶ್ಚಿತ ಎಂದು ಶಾಸಕರು ಸ್ಪಷ್ಟಪಡಿಸಿದರು.








